ಚನ್ನರಾಯಪಟ್ಟಣ: ನಾಡಿನ ಪಾರಂಪರಿಕ ಕಲೆ, ಜಾನಪದ ಹಾಗೂ ರಂಗಭೂಮಿ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಲ್ಲಿ ಯುವಜನತೆಯ ಪಾತ್ರ ಮಹತ್ತರವಾದದ್ದು ಎಂದು ಹಾಸನ ಲೋಕಸಭಾ ಕ್ಷೇತ್ರದ ಸದಸ್ಯರಾದ ಶ್ರೇಯಸ್ ಎಂ.ಪಟೇಲ್ ತಿಳಿಸಿದರು.
ಪಟ್ಟಣದ ಶ್ರೀ ಆದಿಚುಂಚನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕುವೆಂಪು ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಯುವ ಸೌರಭ-2026-27 ಸಾಂಸ್ಕೃತಿಕ ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು,
ಇಂದಿನ ಯುವಪೀಳಿಗೆಯು ದೇಶದ ಸಂಸ್ಕೃತಿ, ಕಲೆ ಮತ್ತು ಜಾನಪದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಇಂತಹ ವೇದಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ.
ಯುವ ಸೌರಭ’ದಂತಹ ವೇದಿಕೆಗಳು ಗ್ರಾಮೀಣ ಹಾಗೂ ಉದಯೋನ್ಮುಖ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡಲಿವೆ ಯುವ ಜನಾಂಗ ವ್ಯಾಸಂಗದ ಜೊತೆಗೆ ಸಾಂಸ್ಕೃತಿಕ ರಂಗದಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.

ದಿವ್ಯ ಸಾನಿಧ್ಯ ವಹಿಸಿದ ಶ್ರೀ ಆದಿಚುಂಚನಗಿರಿ ಹಾಸನ ಮತ್ತು ಕೊಡಗು ಶಾಖ ಮಠದ ಕಾರ್ಯದರ್ಶಿ ಶ್ರೀ ಶಂಬುನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಗ್ರಾಮೀಣ ಭಾಗದ ಉದಯೋನ್ಮುಖ ಕಲಾವಿದರನ್ನು ಮುನ್ನೆಲೆಗೆ ತರಲು ಮತ್ತು ಅವರ ಕಲೆಗೆ ಸೂಕ್ತ ವೇದಿಕೆ ಕಲ್ಪಿಸಲು ನಿರಂತರವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಹಳ್ಳಿ ಬದುಕಿನಲ್ಲಿ ಜನಪದ ಮೂಡಿದೆ. ಬೆವರಿನ ಸಂಸ್ಕೃತಿಯೇ ಜನಪದ ಸಂಸ್ಕೃತಿ. ದುಡಿಯುತ್ತಾ ದುಡಿಯುತ್ತಾ ನಮ್ಮ ಪೂರ್ವಜರು ಬದುಕು ಕಟ್ಟಿಕೊಳ್ಳುವ ಬಗ್ಗೆ ತಮ್ಮ ಅನುಭವದ ಮೂಲಕ ಮಾತೃ ಸ್ಥಾನದಲ್ಲಿರುವ ಜಾನಪದ ಕಲೆ ಸಂಸ್ಕೃತಿ, ಹಾಗೂ ಸಾಹಿತ್ಯ ಹಳ್ಳ್ಳಿಗಾಡಿನ ಜಾನಪದರು ತಮ್ಮ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಮೂಲಕ ಜಾನಪದದ ನೆಲೆಗಟ್ಟನ್ನು ಗಟ್ಟಿಗೊಳಿಸಿದ್ದಾರೆ. ಜಾನಪದ ಸಂಸ್ಕೃತಿ ಅಳಿದರೆ ನಮ್ಮತನವನ್ನು ನಾವು ಕಳೆದುಕೊಂಡಂತೆ. ಜಾನಪದ ಸೊಗಡಿನಲ್ಲೇ ಭಾರತೀಯ ಮೂಲ ಪರಂಪರೆಯ ಸತ್ವ ಅಡಗಿದೆ. ಹೀಗಾಗಿ ಆಧುನಿಕತೆ ಭರಾಟೆಗೆ ಸಿಲುಕಿ ಇಂಥ ಮಾತೃ ಸಂಸ್ಕೃತಿ ಅಳಿಯಲು ಬಿಡಬಾರದು ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಎಚ್.ಎಲ್.ಮಲ್ಲೇಶ ಗೌಡ ಉದ್ಘಾಟನೆ ನುಡಿಗಳನಾಡಿ, ಜಾನಪದ ಕಲೆಗಳು ನಮ್ಮ ದೇಶದ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ನಮ್ಮ ಸಂಸ್ಕೃತಿ ಹಾಗೂ ದೇಶಿಯ ಸೊಗಡಾಗಿರುವ ಇವು ನಮ್ಮ ನಾಗರಿಕತೆಯ ಸಂಕೇತವಾಗಿವೆ. ಈ ಕಲೆಗಳನ್ನು ಉಳಿಸಿ ಬೆಳಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಜನಪದ ಹಾಡು, ಜನಪದ ನೃತ್ಯ, ಬೀಸುಕಲ್ಲಿನ ಪದ, ಜೊಗುಳ ಪದ ಇಂತಹ ಅನೇಕ ಹಾಡುಕುಣಿತಗಳು ಕೃಷಿ ಬದುಕು ಹಾಗೂ ಹಳ್ಳಿ ಬದುಕಿನಲ್ಲಿ ಮೂಡಿಬಂದ ಅತ್ಯಧ್ಬುತ ಕಲೆಗಳಾಗಿವೆ. ಇವುಗಳಲ್ಲಿ ದೇಸೀಯ ಸೊಗಡಿನ ಜೊತೆಗೆ ಸಮಾಜದ ಅಂತಕರಣ ಅದರಲ್ಲಿ ಅಡಗಿದೆ. ಜನಪದರು ತಮ್ಮ ಅನುಭಾವದ ನೆಲೆಯ ಮೇಲೆ ಜನಪದ ಗೀತೆಗಳನ್ನು ರಚಿಸಿದ್ದಾರೆ. ಅವುಗಳ ಅನುಕರಣೆ ಇಂದಿನ ಪೀಳಿಗೆಗೆ ಅವಶ್ಯಕವಾಗಿದೆ.

ಸಿನಿಮೀಯ ಬದುಕು ಬಿಟ್ಟು ದೇಶಿ ಸಂಸ್ಕೃತಿಯಲ್ಲಿ ತೊಡಗಿಸಿಕೊಳ್ಳಲು ಯುವ ಸೌರಭ ಸಹಕಾರಿಯಾಗಲಿ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಚ್.ಪಿ.ತಾರಾನಾಥ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಜಿ.ಆರ್.ರಂಜಿತ್ ಗೊರೂರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಪಿ.ಕೃಷ್ಣೇಗೌಡ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಕೆ.ಎಲ್.ಯಶವಂತ್, ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಕೆ.ಮಂಜುನಾಥ್, ಬಿಜಿಎಸ್ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜಿನ ಪ್ರಾಂಶುಪಾಲ ಸಿ.ಸಿ ಕುಮಾರ್, ಸೇರಿದಂತೆ ತಾಲೂಕಿನ ಕಲಾವಿದರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
– ಮಂಜುನಾಥ್ ಐ.ಕೆ.
