ಹಾಸನ-ರಾಜ್ಯದಂತೆ ಜಿಲ್ಲೆಯಲ್ಲೂ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಪೌರಕಾರ್ಮಿಕರ ಅನಿರ್ದಿಷ್ಟ ಪ್ರತಿಭಟನೆಗೆ ಸಂಸದ, ಶಾಸಕ, ಮಾಜಿ ಶಾಸಕ ಬೆಂಬಲ ನೀಡಿದ್ದಾರೆ.
ಸಂಸದ ಶ್ರೇಯಸ್ ಎಂ.ಪಟೇಲ್, ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಹಾಗೂ ಮಾಜಿ ಶಾಸಕ ಪ್ರೀತಂ ಜೆ.ಗೌಡ ಅವರು ಧರಣಿ ನಿರತರ ಮನವಿ ಆಲಿಸಿ, ಬೆಂಬಲ ವ್ಯಕ್ತಪಡಿಸಿದರು. ನಗರಸಭೆ ಎದುರು ನಡೆಯುತ್ತಿರುವ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿದ ಶ್ರೇಯಸ್, ಧರಣಿ ನಿರತರಿಂದ ಮನವಿ ಸ್ವೀಕರಿಸಿದರು. ನಂತರ ಮಾತನಾಡಿ, ಸ್ವಚ್ಛತೆ ಕಾಪಾಡುವಲ್ಲಿ ಮಹತ್ತರ ಕೊಡುಗೆ ನೀಡುವ ಪೌರ ಕಾರ್ಮಿಕರ ಸೇವೆಯನ್ನು ನಮ್ಮ ಸರ್ಕಾರ ಯಾವಾಗಲೂ ಗೌರವಿಸುತ್ತದೆ. ನಿಮ್ಮ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಹಾಸನ ನಗರಪಾಲಿಕೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ, ನೂತನ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಂಸದರು ಚರ್ಚಿಸಿದರು. ಇದಕ್ಕೂ ಮುನ್ನ ಶಾಸಕ ಸ್ವರೂಪ್ ಪ್ರಕಾಶ್ ಭೇಟಿ ನೀಡಿ, ಮನವಿ ಸ್ವೀಕರಿಸಿ ನಿಮ್ಮ ಬೇಡಿಕೆ ಬಗ್ಗೆ ಸದನದಲ್ಲಿ ಚರ್ಚೆ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರೀತಂಗೌಡ, ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಪ್ರತಿಭಟನೆಗೆ ಬೆಂಬಲ ಘೋಷಿಸಿ ಸ್ಥಳದಿಂದಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಕರೆ ಮಾಡಿದರು.
ಈ ವೇಳೆ ಪ್ರತಿಭಟನಾಕಾರರ ಜೊತೆ ವಿಜಯೇಂದ್ರ ಮಾತನಾಡಿ, ಮುಂದಿನ ಅಧಿವೇಶನದಲ್ಲಿ ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಈ ವೇಳೆ ಮಹಾನಗರಪಾಲಿಕೆ ಅಧ್ಯಕ್ಷ ಎಂ.ಚಂದ್ರೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್ ಇತರರು ಇದ್ದರು.
