ತುಮಕೂರು:ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಒಪ್ಪಿದವರನ್ನು ಜಿಲ್ಲಾಧ್ಯಕ್ಷರಾಗಿ ನೇಮಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಸಂಘಟನ್ ಅಭಿಯಾನ ನಡೆಯುತ್ತಿದ್ದು, ಇದರ ಭಾಗವಾಗಿ ಕಳೆದ ಏಳು ದಿನಗಳಿಂದ ತುಮಕೂರು ಜಿಲ್ಲಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರು ಮತ್ತು ಮುಖಂಡರ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಎಐಸಿಸಿ ವೀಕ್ಷಕಿ ಸಂಗೀತ ಬೇನಿವಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ,ಉಪಾಧ್ಯಕ್ಷರಾದ ರಾಹುಲ್ಗಾಂಧಿ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರ ನಿರ್ದೇಶನದಂತೆ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಲಾಗಿದೆ.ಆಗಸ್ಟ್ 14 ರವರೆಗೆ ಕಾರ್ಯಕರ್ತರು ಮುಕ್ತವಾಗಿ ಭೇಟಿಯಾಗಿ, ಇಲ್ಲವೇ ಪಕ್ಷ ತಂದಿರುವ ಅರ್ಜಿಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದಾಗಿದೆ ಎಂದರು.
ಸAಘಟನ್ ಅಭಿಯಾನದ ಪ್ರಮುಖ ಉದ್ದೇಶ,ಇದುವರೆಗೂ ಜಿಲ್ಲಾಧ್ಯಕ್ಷರ ನೇಮಕಕ್ಕೆ ಇದ್ದ ಶಾಸಕರು, ಮಂತ್ರಿಗಳ ಶಿಫಾರಸ್ಸು ಹೊರತು ಪಡಿಸಿ,ಎಲ್ಲ ಕಾರ್ಯಕರ್ತರು, ಮುಖಂಡರುಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ, ಎಲ್ಲರಿಗೂ ಒಪ್ಪಿಗೆಯಾಗುವ ನಾಯಕನನ್ನು ಆಯ್ಕೆ ಮಾಡಬೇಕೆಂಬುದಾಗಿದೆ.ಹಾಗಾಗಿ ತಳಮಟ್ಟದಲ್ಲಿ ಕಾರ್ಯಕರ್ತರು ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಇದುವರೆಗೂ 25ಕ್ಕೂ ಹೆಚ್ಚು ಜನರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎಐಸಿಸಿ ನಿಯಮಗಳ ಪ್ರಕಾರ ಪಕ್ಷದಲ್ಲಿ ಕನಿಷ್ಠ ಐದು ವರ್ಷಗಳ ಕಾಲ ಪಕ್ಷದಲ್ಲಿ ಕಾರ್ಯನಿರ್ವಹಿಸಬೇಕು.ಕಾಂಗ್ರೆಸ್ ತತ್ವ ಸಿದ್ದಾಂತಗಳಿಗೆ ಬದ್ಧವಾಗಿರುವ ವ್ಯಕ್ತಿಯಾಗಿರಬೇಕು.55 ವರ್ಷಗಳ ಒಳಗಿರಬೇಕು. ಒಂದು ವೇಳೆ ವಯಸ್ಸು ಹೆಚ್ಚಾಗಿದ್ದರೂ ಪಕ್ಷದಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದರೆ ಅವಕಾಶ ಕಲ್ಪಿಸಬಹುದು. ಎಐಸಿಸಿ ನನಗೆ ವಹಿಸಿರುವ ಕೆಲಸವನ್ನು ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಮಾಡಿ,ವರದಿ ಸಲ್ಲಿಸುತ್ತೇನೆ.ಈಗಾಗಲೇ ಬಿಹಾರ,ಉತ್ತರಾಖಂಡ ಹಾಗೂ ಮಹಾರಾಷ್ಟçಗಳಲ್ಲಿ ನನಗೆ ವಹಿಸಿದ್ದ ಜವಾಬ್ದಾರಿಯನ್ನು ನಿಭಾಯಿಸಿ ದ್ದೇನೆ. ಯಾರ ಒತ್ತಡಕ್ಕೂ ಮಣಿಯದೆ ನಿಷ್ಪಕ್ಷಪಾತ ವರದಿಯನ್ನು ಪಕ್ಷದ ಹೈಕಮಾಂಡ್ಗೆ ಸಲ್ಲಿಸಲಿದ್ದೇನೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ವೀಕ್ಷಕರಾದ ಮೀಲಿಂದ್ ದೇವಸೇನ,ವಿಜಯಕುಮಾರ್,ರೇಖಾ ಹುಚ್ಚಪ್ಪಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ರಮೇಶ್ಬಾಬು, ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
