ಕೆ.ಆರ್.ಪೇಟೆ, ಜು.30: ತಾಲೂಕಿನ ಕಸಬಾ ಹೋಬಳಿಯ ವಳಗೆರೆಮೆಣಸ ಗ್ರಾಮದ ಐತಿಹಾಸಿಕ ದೊಡ್ಡಕೆರೆಯ ಸುಮಾರು 200ರಿಂದ 300 ಎಕರೆಯಷ್ಟು ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ, ಅಚ್ಚುಕಟ್ಟು ರೈತರು ಕೆರೆ ಅಂಗಳದಲ್ಲೇ ಸಾಂಕೇತಿಕ ಪ್ರತಿಭಟನೆ ನಡೆಸಿ ತಕ್ಷಣ ಒತ್ತುವರಿ ತೆರವುಗೊಳಿಸುವಂತೆ ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಹೇಮಾವತಿ ನೀರಾವರಿ ಇಲಾಖೆಯನ್ನು ಆಗ್ರಹಿಸಿದರು.

ಮಳೆ ಕೊರತೆಯಿಂದ ಕೆರೆ ಬತ್ತಿಹೋಗಿರುವುದನ್ನು ದುರುಪಯೋಗಪಡಿಸಿಕೊಂಡು ಕೆಲವರು ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳ ಮೂಲಕ ಕೆರೆಯೊಳಗೆ ಮಣ್ಣು ಸುರಿದು ಜಮೀನು ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು.

ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡ ಈ ಕೆರೆ ಸುಮಾರು 1,300 ಎಕರೆ ವಿಸ್ತೀರ್ಣ ಹೊಂದಿದ್ದು, ಬೊಮ್ಮನಾಯಕನಹಳ್ಳಿ, ಅಗ್ರಹಾರಬಾಚಹಳ್ಳಿ, ಚಿಲ್ಲದಹಳ್ಳಿ, ಬಿ.ಕೋಡಿಹಳ್ಳಿ ಹಾಗೂ ವಳಗೆರೆಮೆಣಸ ಸೇರಿದಂತೆ ಹಲವು ಗ್ರಾಮಗಳ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವ ಜೀವನಾಡಿಯಾಗಿದೆ. ಆದರೆ ಒತ್ತುವರಿ ಹಾಗೂ ತೂಬು-ನಾಲೆಗಳಲ್ಲಿ ಹೂಳು ಮತ್ತು ಗಿಡಗಂಟಿ ತುಂಬಿರುವುದರಿಂದ ಕೆಳಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂದು ಅಚ್ಚುಕಟ್ಟು ರೈತರು ದೂರಿದರು.

ಕೆಲವರು ಕೆರೆಯ ಮಧ್ಯಭಾಗದಲ್ಲಿಯೇ ಮಣ್ಣು ತುಂಬಿಸಿ ಒತ್ತುವರಿ ಮಾಡಿಕೊಂಡಿರುವುದಲ್ಲದೆ, ನೂರಾರು ಪಂಪ್ಸೆಟ್ಗಳನ್ನು ಅಳವಡಿಸಿ ನೀರನ್ನು ಅಕ್ರಮವಾಗಿ ಬಳಸುತ್ತಿದ್ದಾರೆ. ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಿನ ಅಭಾವ ಉಂಟಾಗಿದ್ದು, ನೀರಾವರಿ ಬೆಳೆಗಳ ಬದಲು ಒಣಭೂಮಿ ಬೆಳೆಗಳನ್ನು ಬೆಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಆರೋಪಿಸಿದರು.

ಒತ್ತುವರಿಯಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸಂಪೂರ್ಣ ಕೆರೆಯನ್ನು ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ತಾಲೂಕು ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಂದ್ರ, ಮಾಜಿ ಸದಸ್ಯ ಸಿ.ಆರ್.ಪಿ. ಕುಮಾರ್, ಅಚ್ಚುಕಟ್ಟು ರೈತರಾದ ನವೀನ್ ಕುಮಾರ್, ಸೋಮೇಗೌಡ, ಮೊಗಣ್ಣೇಗೌಡ, ಗಿರೀಶ್, ರಾಮೇಗೌಡ, ಕುಮಾರ್, ಪ್ರಕಾಶ್, ರಂಜಿತ್, ಕಿರಣ್, ಮೋಹನ್ ಸೇರಿದಂತೆ ಹಲವರು ಎಚ್ಚರಿಕೆ ನೀಡಿದರು.
ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಹೇಮಾವತಿ ನೀರಾವರಿ ಇಲಾಖೆಯ ನಂ.10ರ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಶ್ವನಾಥ್, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಜ್ಞಾನೇಶ್, ಅಧಿಕಾರಿ ಫಾತಿಮಾ ಹಾಗೂ ಇತರರು ಪರಿಶೀಲನೆ ನಡೆಸಿದರು.

ಅಧಿಕಾರಿಗಳು, ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡರೂ ಅದು ಯಾರ ಹೆಸರಿಗೂ ಖಾತೆಯಾಗುವುದಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಕೆರೆ ಒತ್ತುವರಿ ಸಾಬೀತಾದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ ₹1 ಲಕ್ಷದವರೆಗೆ ದಂಡ ವಿಧಿಸುವ ಕಾನೂನು ಜಾರಿಯಲ್ಲಿದೆ ಎಂದು ಎಚ್ಚರಿಸಿದರು. ಒಂದೆರಡು ದಿನಗಳಲ್ಲಿ ಮರುಸರ್ವೆ ನಡೆಸಿ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.
– ಶ್ರೀನಿವಾಸ್ ಆರ್.
