ಟಿ.ನರಸೀಪುರ : ರಾಜ್ಯಾದ್ಯಂತ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬೇಕೆಂದು ಸಾಮಾಜಿಕ ಹೋರಾಟಗಾರರಾದ ಎಸ್ ಕೆ ರಾಜೂಗೌಡ ಒತ್ತಾಯಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಸಾಮಾಜಿಕ ವ್ಯವಸ್ಥೆಯಲ್ಲಿ ನೊಂದ ಅಲಕ್ಷಿತ ಸಮುದಾಯದ ಜನರ ಏಳಿಗೆಗಾಗಿ ದುಡಿ ಸಾಮಾಜಿಕ ಅಸಾಮಾನತೆ, ಅಜ್ಞಾನ, ಮೂಡನಂಬಿಕೆ ಮುಂತಾದ ಅನಾಗರೀಕ ಆಚರಣೆಗಳನ್ನು ಕೊನೆಗಾಣಿಸಲು ಕೆಲಸ ಮಾಡಿದ ಮತ್ತು ಜನಪರವಾದ,ಸಮಸಮಾಜ ನಿರ್ಮಾಣಕ್ಕೆ ಪೂರಕವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿದ ನಾಡಿನ ಮತ್ತು ಇತರ ನಾಡಿನ ಮಹಾನೀಯರ ಜಯಂತಿಗಳನ್ನು ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಸರಿಯಷ್ಟೆ,ಆದರೆ ನಮ್ಮದೇ ನಾಡಿನ ಜಗತ್ತಿಗೆ ಮಾದರಿ ಪ್ರಜಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಅಧಿಕೃತವಾಗಿ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಆಚರಣೆ ಮಾಡದಿರುವುದು ಸರಿಯಲ್ಲ ಮತ್ತು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಮತ್ತು ಶಾಲಾ, ಕಾಲೇಜುಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರ ಅಳವಡಿಕೆ ಮಾಡದೇ ಇರುವುದು ಸರಿಯಲ್ಲ. ಹಲವು ಮಾದರಿ ಪ್ರಥಮ ಜನಪರ ಆದೇಶ, ಕಾನೂನು ಮತ್ತು ಆಡಳಿತದ ಮೂಲಕ ಜಗತ್ತಿನ ಆಡಳಿತಗಾರಿಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಆದರ್ಶವಾಗುವಂತಹ ಎಷ್ಟೊಂದು ಸಾಧನೆಗಳನ್ನು ಮಾಡಿದರು ಎನ್ನುವುದಕ್ಕೆ ಒಂದು ಜ್ವಲಂತ ನಿದರ್ಶನವಾಗಿ ನಾವು ಈ ಕೆಲವು ಸಾಧನೆಗಳನ್ನು ಸಾಕ್ಷಿಯಾಗಿ ನೋಡಬಹುದು.
ಕೃಷ್ಣರಾಜ ಸಾಗರ ಅಣೆಕಟ್ಟು, ಮಹಾರಾಣಿ ಕಾಲೇಜು ಬೆಂಗಳೂರು ಮತ್ತು ಮೈಸೂರು, ನಿಮಾನ್ಸ್ ಆಸ್ಪತ್ರೆ ಬೆಂಗಳೂರು, ಮಿಂಟೋ ಹಾಸ್ಪಿಟಲ್ ಬೆಂಗಳೂರು,ಕೆ . ಆರ್ . ಮಾರುಕಟ್ಟೆ ಬೆಂಗಳೂರು, ಬನಾರಸ್ ಹಿಂದೂ ಮಹಾವಿದ್ಯಾಲಯದ ಸಹ ನಿರ್ಮಾತೃ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು, ಶಿವನಸಮುದ್ರ ಜಲವಿದ್ಯುತ್ ಯೋಜನೆ, ವಾಣಿವಿಲಾಸ ಅಣೆಕಟ್ಟು ಚಿತ್ರದುರ್ಗ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ, ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ, ಬೆಂಗಳೂರು ವಿಶ್ವವಿದ್ಯಾಲಯ (UVCE) ಸ್ಥಾಪನೆ, ಯುವರಾಜ ಕಾಲೇಜು ಮೈಸೂರು,ಮೈಸೂರು ರಾಜ್ಯ ರೈಲ್ವೆ, ಮೈಸೂರು ಮೆಡಿಕಲ್ ಕಾಲೇಜ್, ಬೆಂಗಳೂರು ಟೌನ್ ಹಾಲ್, ವಾಣಿವಿಲಾಸ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಮಂಡ್ಯ ಜಿಲ್ಲೆ ರಚನೆ.

ದೇಶದಲ್ಲಿ ಮೊಟ್ಟಮೊದಲ ರಸ್ತೆಗಳಿಗೆ ದಾರಿದೀಪ ಅಳವಡಿಕೆ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ , ಭದ್ರಾವತಿ ಸ್ಥಾಪನೆ. ಸೈಂಟ್ ಫಿಲೋಮಿನಾ ಚರ್ಚ್ ಸ್ಥಾಪನೆ. ಲಲಿತ ಮಹಲ್ ಪ್ಯಾಲೇಸ್ ಸ್ಥಾಪನೆ. ಹಿರೇಭಾಸ್ಕರ ಅಣೆಕಟ್ಟು ಶರಾವತಿ ನದಿಯಲ್ಲಿ ಸ್ಥಾಪನೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ. ವಿಧವಾ ಹುಡುಗಿಯರಿಗೆ ಸ್ಕಾಲರ್ಶಿಪ್. ಬಾಲ್ಯವಿವಾಹ ನಿಷೇಧ. ವಿಶ್ವೇಶ್ವರಯ್ಯ ಕಾಲುವೆ ಸ್ಥಾಪನೆ. ಮೈಸೂರು ರೆಸಿಡೆನ್ಶಿಯಲ್ ಕೃಷಿ ಶಾಲೆ ಸ್ಥಾಪನೆ. ಮೈಸೂರು ಸೋಶಿಯಲ್ ಪ್ರೋಗ್ರೆಸ್ ಅಸೋಸಿಯೇಷನ್ ಸ್ಥಾಪನೆ. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜ್ , ಮೈಸೂರು.ವುಡ್ ಡಿಸ್ಟಿಲ್ಲೇಶನ್ ಫ್ಯಾಕ್ಟರಿ , ಭದ್ರಾವತಿ. ಮೈಸೂರ್ ಕ್ರೋಮ್ ಮತ್ತು ಟ್ಯಾನಿಂಗ್ ಫ್ಯಾಕ್ಟರಿ. ಸರ್ಕಾರಿ ವಿಜ್ಞಾನ ಕಾಲೇಜು , ಬೆಂಗಳೂರು. ಕೃಷ್ಣರಾಜನಗರ ಟೌನ್ ಸ್ಥಾಪನೆ. ಕೃಷ್ಣ ರಾಜೇಂದ್ರ ಆಸ್ಪತ್ರೆ ಮೈಸೂರು, ಸಮಾಜದ ಜ್ಞಾನಿಗಳ ಜ್ಞಾನವನ್ನು ಸರ್ಕಾರದ ಉಪಯೋಗಕ್ಕೆ ಬಳಸಿಕೊಳ್ಳಲು ಮೈಸೂರು ಲೆಜಿಸ್ಲೇಟಿವ್ ಕೌನ್ಸಿಲ್ ಸ್ಥಾಪನೆ. ದೇಶದಲ್ಲಿ ಮೊಟ್ಟಮೊದಲ ಮೈಸೂರು ಬಾಯ್ಸ್ ಸ್ಕೌಟ್ಸ್ ಸ್ಥಾಪನೆ, ಸರ್ಕಾರಿ ಶ್ರೀಗಂಧದ ಎಣ್ಣೆಯ ಫ್ಯಾಕ್ಟರಿ ಸ್ಥಾಪನೆ, ಚೇಂಬರ್ ಆಫ್ ಕಾಮರ್ಸ್ ಮೈಸೂರು, ಮೈಸೂರು ಶುಗರ್ ಮಿಲ್ಸ್ ಮಂಡ್ಯ. ಮೈಸೂರ್ ಲ್ಯಾಂಪ್ಸ್ ಬೆಂಗಳೂರು. ಮೈಸೂರ್ ಪೇಪರ್ ಮಿಲ್ಸ್ ಭದ್ರಾವತಿ. ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಸ್ಥಾಪನೆಗೆ ಭೂಮಿ ಕೊಡುಗೆ. ಮೈಸೂರು ಕೆಮಿಕಲ್ ಹಾಗೂ ಫರ್ಟಿಲೈಸರ್ಸ್ ಕಾರ್ಖಾನೆ. ಗ್ಲಾಸ್ ಹಾಗೂ ಪಿಂಗಾಣಿ ಕಾರ್ಖಾನೆ, ಬೆಂಗಳೂರು. ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ – ದೇಶದಲ್ಲೇ ಮೊದಲು.ಮೈಸೂರು ಪೈಂಟ್ಸ್ ಹಾಗೂ ವಾರ್ನಿಷ್ ಲಿಮಿಟೆಡ್ ಸ್ಥಾಪನೆ ಸೇರಿದಂತೆ ಮುಂತಾದವು ಸಾಕ್ಷಿಯಾಗಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ರವರು 4 ಜೂನ್ 1884 ರಂದು ಜನಿಸಿದರು ಮತ್ತು ಆಗಸ್ಟ್ 3.1940 ರಂದು ಮರಣ ಹೊಂದಿದರು. 1894 ರಿಂದ 1940 ರಲ್ಲಿ ಅವರ ಮರಣದ ತನಕ ಮೈಸೂರಿನ ಮಹಾರಾಜರಾಗಿದ್ದರು. ಅವರನ್ನು ಜನಪ್ರಿಯವಾಗಿ ರಾಜರ್ಷಿ ಎಂದು ಕರೆಯಲಾಗುತ್ತದೆ, ಇದನ್ನು ನೀಡಿದವರು ಮಹಾತ್ಮ ಗಾಂಧಿ.
ಅವರ ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾಧನೆಗಳಿಗಾಗಿ ಅವರ ಮರಣದ ಸಮಯದಲ್ಲಿ, ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು, ವೈಯಕ್ತಿಕ ಸಂಪತ್ತು US$1940 ಮಿಲಿಯನ್ ಎಂದು ಅಂದಾಜಿಸಲಾಗಿದೆ.ಇದು 400 ರ ಬೆಲೆಯಲ್ಲಿ $7 ಶತಕೋಟಿಗೆ ಸಮನಾಗಿದೆ.
ಹೈದರಾಬಾದ್ನ ನಿಜಾಮ್ ಮೀರ್ ಒಸ್ಮಾನ್ ಅಲಿ ಖಾನ್ ನಂತರ ಅವರು ಎರಡನೇ ಶ್ರೀಮಂತ ಭಾರತೀಯರಾಗಿದ್ದರು.ಬುಡಕಟ್ಟು, ಗಿರಿಜನ, ಅರಣ್ಯವಾಸಿಗಳಿಗೆ ಮೊಟ್ಟ ಮೊದಲು ಶಾಲೆಗಳನ್ನು ತೆರೆಯಲಾಯಿತು. ಅಸ್ಪೃಶ್ಯರಿಗಾಗಿಯೇ ಹುಸ್ಕೂರು ಹಾಗೂ ಟಿ.ನರಸೀಪುರದಲ್ಲಿ ಶಾಲೆಗಳನ್ನು ಪ್ರಾರಂಭಿಸಲಾಯಿತು. ನಂತರ ಇವರ ಆಡಳಿತಾವಧಿಯಲ್ಲಿ ಸುಮಾರು 800 ಶಾಲೆಗಳನ್ನು ತೆರೆಯಲಾಯಿತು.
ಮೊಟ್ಟ ಮೊದಲ ಬಾರಿಗೆ ಸ್ತ್ರೀ ಶಿಕ್ಷಣವನ್ನು ಕಡ್ಡಾಯ ಮಾಡಲಾಯಿತು.
1902 – ಬೆಂಗಳೂರಿನ ಪ್ರಥಮ ವಾಣಿಜ್ಯಶಾಲೆ ಪ್ರಾರಂಭಿಸಲಾಯಿತು.
1903 – ಮೈಸೂರಿನಲ್ಲಿ ತಾಂತ್ರಿಕ ಶಾಲಾ ಸ್ಥಾಪನೆ.
1906 – ಕುರುಡ ಹಾಗೂ ಮೂಕ ಮಕ್ಕಳಿಗೆ ಶಾಲೆಗಳನ್ನು ಪ್ರಾರಂಭಿಸಿದರು.
1911 – ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಆರಂಭಿಸಲಾಯಿತು.
1912 – ಮೊದಲ ಬಾರಿಗೆ ವಯಸ್ಕರ ಶಿಕ್ಷಣ ಆಂದೋಲನ ಪ್ರಾರಂಭಿಸಿ, 7000 ಸಾಕ್ಷರತಾ ಕೇಂದ್ರಗಳನ್ನು ತೆರೆದಿದ್ದರು.
1916 – ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ. ಉರ್ದು ಶಾಲೆಗಳ ಸ್ಥಾಪನೆ.
1918 – ಶಾಲಾ ಪ್ರವೇಶಕ್ಕೆ ಜಾತಿ ಪದ್ದತಿಯನ್ನು ನಿರ್ಮೂಲನೆ ಮಾಡಲಾಯಿತು.
1919 – ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕವನ್ನು ರದ್ದು ಮಾಡಿದರು.
1909 ರಲ್ಲಿ ದೇವದಾಸಿ ಪದ್ಧತಿ ನಿಷೇಧ. 1910 ರಲ್ಲಿ ಬಸವಿ ಪದ್ಧತಿ ರದ್ಧತಿ. 1910 ರಲ್ಲಿ ’ಗೆಜ್ಜೆಪೂಜೆ’ ಪದ್ಧತಿ ಸಂಪೂರ್ಣ ನಿರ್ಮೂಲನೆ.1936 ಜುಲೈ 14 ರಂದು ವೇಶ್ಯಾ ವೃತ್ತಿ ತಡೆಗಟ್ಟುವ ಕಾಯ್ದೆ ಜಾರಿಗೆ ತಂದರು.
1936 ಜುಲೈ 7 ರಂದು ವಿಧವೆಯರಿಗೆ ಮರು ವಿವಾಹ ಮಾಡಿಕೊಳ್ಳುವ ಕಾಯ್ದೆಯ ಜಾರಿಗೆ ತಂದರು.
1936 ಜುಲೈ 7 ರಂದು ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ. 1914 ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ. 1919 ರಲ್ಲಿ ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕ ರದ್ಧತಿ. 1927 ರಲ್ಲಿ ಸ್ತ್ರೀಯರಿಗೆ ಮತದಾನದ ಹಕ್ಕನ್ನು ಮೊಟ್ಟ ಮೊದಲ ಬಾರಿಗೆ ಕಲ್ಪಿಸಿಕೊಟ್ಟರು.1905 ರಲ್ಲಿ ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆಯನ್ನು ಜಾರಿಗೆ ತಂದರು.

1913 ರಲ್ಲಿ ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆಯನ್ನು ಜಾರಿ ಮಾಡಿದರು.1918 ರಲ್ಲಿ ಗ್ರಾಮ ಪಂಚಾಯ್ತಿಗಳ ಕಾಯ್ದೆಯನ್ನು ಜಾರಿಗೆ ತಂದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 38 ವರ್ಷಗಳ ಕಾಲ ದಕ್ಷ ಆಡಳಿತ ನಡೆಸಿ “ರಾಜರ್ಷಿ” ಬಿರುದು ಪಡೆದರು. ತಮ್ಮ ಸಂಸ್ಥಾನದ ಏಳಿಗೆಗಾಗಿ, ತಮ್ಮ ಪ್ರಜೆಗಳ ನೆಮ್ಮದಿ ಬದುಕಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟರು.
ಸಾಮಾಜಿಕ ಪರಿವರ್ತನೆಯ ರೂವಾರಿಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಗಸ್ಟ್ 3, 1940 ರಲ್ಲಿ ತಮ್ಮ ಇಹಲೋಕದ ಯಾತ್ರೆ ಮುಗಿಸಿದರು.
ಆದ್ದರಿಂದ ನಮ್ಮ ಸರ್ಕಾರ ನಮ್ಮ ನಾಡಿನ ಸಮಾನತೆ ಮತ್ತು ಅಭಿವೃದ್ಧಿ ಯ ಐಕಾನ್ ಆಗಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜೀವನ ಚರಿತ್ರೆಯನ್ನು ಕಡ್ಡಾಯವಾಗಿ ಶಾಲಾ, ಕಾಲೇಜುಗಳ ಪಠ್ಯಕ್ರಮದಲ್ಲಿ ಸೇರಿಸಬೇಕು ಮತ್ತು ಸರ್ಕಾರ ನಾಡಿನಾದ್ಯಂತ ಶಾಲಾ, ಕಾಲೇಜು, ವಿಶ್ವವಿದ್ಯಾನಿಲಯ ಸೇರಿದಂತೆ ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದ ವರೆಗೆ ಎಲ್ಲಾ ಸರ್ಕಾರಿ, ಸಾರ್ವಜನಿಕ ಕಛೇರಿಗಳಲ್ಲಿ ಅವರ ಭಾವಚಿತ್ರ ಅಳವಡಿಸಲು ಮತ್ತು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಕಡ್ಡಾಯವಾಗಿ ಆಚರಣೆ ಮಾಡಲು ಸರ್ಕಾರ ಆದೇಶ ಮಾಡಬೇಕೆಂದು ಆಗ್ರಹಪೂರ್ವಕ ಮನವಿ ಮಾಡಿದರು.
ಎಂ.ನಾಗೇಂದ್ರಕುಮಾರ್
ವರದಿಗಾರರು.
