ಈಗಿನ ಜನರ ಉದ್ದಟತನದ ನಡೆ, ಅಹಂಕಾರದ ವರ್ತನೆ, ಅಶ್ಲೀಲತೆಯ ನಡುವಳಿಕೆ, ಸೌಜನ್ಯವನ್ನು ಅರಿಯದ ಭಾವನೆ, ಅರ್ಥವಿಲ್ಲದ ತರ್ಕ, ನಿಂದಿಸಿ ಆನಂದಿಸುವ ಮನೋ ವಿಕೃತಗಳು, ಪೂರ್ವಗ್ರಹಿಕೆಯಿಂದ ಇತರರ ತೇಜೋವಧೆ, ನಂಬಿಸಿ ಮೋಸ ಮಾಡುವ ಪ್ರವೃತ್ತಿ, ವೃತ್ತಿಯ ಕ್ಷೀಣತೆ, ಬದಲಾದ ದೃಷ್ಟಿಕೋನಗಳು, ಮೌಢತ್ವ ಹಾಗೂ ಕಡೆಯದಾಗಿ ವಿಜ್ಞಾನದ ಮೇಲೆ ಇರುವ ನಂಬಿಕೆ ಕಮ್ಮಿ ಆಗುತ್ತಿರುವುದು ಮತ್ತು ರಾಜನೀತಿಯಲ್ಲಿ ನಂಬಿಕೆ ನಶಿಸುತ್ತಿರುವುದರಿಂದ ನಮಗೆ ಮನೋ ಆಘಾತ, ಖಿನ್ನತೆ, ಆತಂಕ, ಮನೋ ನ್ಯೂನತೆ, ಬುದ್ದಿ ವಿಕಲ್ಪ, ವ್ಯಸನದ ಗೀಳು ಮತ್ತು ಉನ್ಮಾದಗಳು ಕಾಣಲಾರಂಭಿಸಿವೆ.
ಇವುಗಳನ್ನು ನಿಯಂತ್ರಿಸಲು ಮನೋ ವಿಜ್ಞಾನದಲ್ಲಿ ಅಥವಾ ಮನಸ್ಸಿನ ಶಾಸ್ತ್ರ ದಲ್ಲಿ ಮನೋ ಮಾಪನಗಳು ಬೇಕಾದಷ್ಟು ಕಂಡರೂ, ಎಲ್ಲವನ್ನೂ ವಿವರಿಸಲು ಸಾಧ್ಯವಾಗದೆ ಇರುವುದರಿಂದ ಕೆಲವು ಮನೋಮಾಪನಗಳನ್ನು ತಿಳಿಸುವ ಪ್ರಯತ್ನ ಮಾಡುವೆ.
ಒತ್ತಡವನ್ನು ಕಡಿಮೆ ಮಾಡುವ ಲಸಿಕೆ (Stress Inoculation ) :
ನಮ್ಮ ದೇಶವು ಎಷ್ಟೋ ಮುನ್ನಡೆ ಸಾಧಿಸಿದೆ. ಸಿಡುಬು (Small Pox) ) ಮತ್ತು ಪೊಲಿಯೋ (Polio) ಲಸಿಕೆಗಳಿಂದ ಈ ಎರಡು ಮಹಾ ಮಾರಿಗಳನ್ನು ದೇಶದಿಂದ ಓಡಿಸಿ ಬಿಟ್ಟಿದ್ದೇವೆ. ನಾವು ದೇವರನ್ನು ಪೂಜಿಸುತ್ತಿದ್ದೇವೆ. ಇರಲಿ, ಅವರವರ ನಂಬಿಕೆಗಳು. ಆದರೆ ನಾವು ನಮಗೆ ಪ್ರಯೋಜನ ಆಗುವಂತಹ ವಸ್ತುಗಳನ್ನು ವಿಜ್ಞಾನಿಗಳು ಕಂಡುಹಿಡಿದಿರಬೇಕಾದರೆ ಅವುರುಗಳ ಚಿತ್ರಗಳನ್ನು ದೇವರ ಚಿತ್ರಗಳ ಪಕ್ಕ ಇಟ್ಟು ಮನೆಯಲ್ಲಿ ನಾವೆಲ್ಲ ಪೂಜೆ ಮಾಡಬೇಕಲ್ಲವೇ? ನಮ್ಮ ಮಕ್ಕಳು ಹೆಗ್ಗಣವಾದರೂ ಪ್ರೀತಿಸಲೇಬೇಕು ಎನ್ನುವುದು ಪೋಷಕರ ದ್ಯೇಯ ವಾಖ್ಯಾನ. ಮಕ್ಕಳ ಪರ ಅಥವ ವಿರುದ್ಧ ನನ್ನ ಚರ್ಚೆಯಲ್ಲ. “ನಾನು ಸುಖವನ್ನು ಕಂಡಿಲ್ಲ, ನೀನಾದರು ಕಾಣು” ಎಂಬ ಅಸಹಜ ಪೋಷಕರ ಧೋರಣೆ. ಮಕ್ಕಳ ನೆಮ್ಮದಿಗೆ ನಮ್ಮ ನೆಮ್ಮದಿಗಳನ್ನು ಬದಿಗೆ ಇಟ್ಟು ಸಂಪತ್ತನ್ನು ಸಂಪಾದನೆ ಮಾಡುತ್ತೇವೆ. ಈ ಕಾರಣದಿಂದ ನಮ್ಮ ಮನೋ ನೆಮ್ಮದಿಗೆ ಭಂಗ ತರುವ ಅಥವಾ ಭಾವನೆಗಳ ಸಮಸ್ಯೆಗಳಿಗೆ ನಾವೇ ಕಾರಣವಾಗಬಹುದು.
ಈ ಕಾರಣದಿಂದ ಪೋಷಕರು ತಮ್ಮ ಮಕ್ಕಳಿಗೆ ಕಷ್ಟ ಎಂಬುದನ್ನು ಹಂತ ಹಂತವಾಗಿ ತಿಳಿಸಿ, ಪರಿವರ್ತನಾ ತಂತ್ರವನ್ನು ಉಪಯೋಗಿಸಿದ ಪಕ್ಷದಲ್ಲಿ ಇವತ್ತಿನ ಮಕ್ಕಳು ಮುಂದೆ ಮನೋ ಸದೃಢ, ಸೌಜನ್ಯ ಶೀಲ, ಸೃಜನ ಭಾವ, ತುಂಬು ನಡವಳಿಕೆ ಮತ್ತು ಜ್ಞಾನ ಸುಸಂಸ್ಕೃತರಾಗುವುದರಲ್ಲಿ ಸಂದೇಹವೇ ಇಲ್ಲ.
ಹೊಂದಾಣಿಕೆ (Adjustment) :
ಮನುಷ್ಯ ಸ್ನೇಹ ಜೀವಿ, ಅವನು ಒಂಟಿಯಾಗಿ ಬಾಳಲು ಅಥವಾ ಜೀವಿಸಲು ಸಾಧ್ಯವೇ ಇಲ್ಲ. ಒಂಟಿ ಜೀವನದ ನೆಡೆ, ಮನೋ ನ್ಯೂನತೆ ಅಥವಾ ಭ್ರಮೆಗೆ ಸಂಬಂಧಪಟ್ಟದ್ದು. ಮನುಷ್ಯನು ಪರಾವಲಂಬಿ ಮತ್ತು ಮಾನವರ ನಡುವೆ ಅನೇಕ ವಿಷಯಗಳು ಅಥವ ವಿಚಾರಗಳು ಪರಸ್ಪರ ವಿನಿಮಯಗೊಳ್ಳುತ್ತಿರುತ್ತವೆ. ಈ ಸಮಯದಲ್ಲಿ ಸಹಬಾಳ್ವೆ, ಸಹಮತ, ಸಹೃದಯಗಳೆಲ್ಲವೂ ಸಮಾಜದ ಏಳಿಗೆಗೆ ಪೂರಕವಾಗಿರುತ್ತವೆ. ಇದರ ಗುಟ್ಟು ಹೊಂದಾಣಿಕೆ. ಹೊಂದಾಣಿಕೆ ಇಲ್ಲದ ಸಂಸ್ಥೆ ಅಧೋಪಥವನ್ನು ಕಾಣುವುದು. ಈ ಹೊತ್ತಿನ ಸಮಾಜದ ದೊಡ್ಡ ಪಿಡುಗು ವಿಚ್ಛೇದನೆ. ಗಂಡ ಹೆಂಡತಿಯ ಪರಸ್ಪರ ಅನುಬಂಧದಲ್ಲಿ ಹೊಂದಾಣಿಕೆಯು ಮಹತ್ತರ ಕಾರ್ಯ ನಿರ್ವಹಿಸುತ್ತದೆ.

ಸಮಯ ಪ್ರಜ್ಞೆ (Time Sense) :
ಪಾಶ್ಚಾತ್ಯ ದೇಶಗಳಲ್ಲಿ ಸಮಯ ಪ್ರಜ್ಞೆ ಎಂಬುದು ಅವಿಭಾಜ್ಯ ಅಂಗ. ಅಲ್ಲಿ ಇದ್ದು ಬದುಕಿದ್ದವನು ತನ್ನ ಜೀವನದಲ್ಲಿ ಉತ್ತಮವಾದುದನ್ನು ಸಾಧಿಸಿರುತ್ತಾನೆ. ನಮ್ಮಲ್ಲಿ Indian Standard Time ಎಲ್ಲರಿಗೂ ತಿಳಿದಿರುವ ವಿಷಯ. “ಕಾಲ” ನಮ್ಮ ಕರ್ತವ್ಯ ಪಾಲನೆಯಲ್ಲಿ ಒಂದು ದೊಡ್ಡ ಸಾಧನ. ಈ ಮಾಪನವನ್ನು ಸರಿಯಾಗಿ ಉಪಯೋಗಿಸಿದಲ್ಲಿ ಬಾಳು ಬೆಳಕಾಗುವುದು. ಹೇಳಿದ ಸಮಯವನ್ನು ಸರಿಯಾಗಿ ಪಾಲಿಸಿದರೆ ವ್ಯವಹಾರ ಉತ್ತಮ ಆಗುವುದು. ನಂಬಿಕೆ ಹತ್ತಿರ ಆಗುವುದು. ಈ ತಿಳುವಳಿಕೆ ಜನರು ಗ್ರಹಿಸಿದರೆ ಒಳಿತು.
ತರ್ಕ ಮತ್ತು ವಿತರ್ಕ (Lagic Argumentation) :
ವಿಮರ್ಶೆ ಮತ್ತು ಸಮಯ ಎರಡು ಜೊತೆಯಲ್ಲಿ ಸಾಗುತ್ತದೆ. ಸಮಯವನ್ನು ಕೊಳ್ಳದೆ ಇರುವವನಿಗೆ ವಿಮರ್ಶೆಗಳು ಸರಿಯಾಗಿ ಇರುವುದಿಲ್ಲ. ನಮ್ಮ ವಿಮರ್ಶೆಗಳು ನಮ್ಮ ಅರ್ಥಕ್ಕೆ ಪೂರಕ. ವಿಮರ್ಶೆ, ಸಮಯ, ವಿವೇಕ ಮತ್ತು ತರ್ಕಗಳು ಮನಸ್ಸಿನ ಸಮೀಕರಣ. ಈ ಮನೋಮಾಪನವನ್ನು ಸರಿಯಾಗಿ ಉಪಯೋಗಿಸದೆ ಇರುವನು ಕುತರ್ಕ (Argumentative) ನಾಗುತ್ತಾನೆ. ಆಗಲೇ ಜಗಳ, ಹೊಡೆದಾಟ ಮತ್ತು ಕೈ ಮೀರಿದರೆ ಹತ್ಯೆ, ಇದೇ ಕಾರಣದಿಂದ ಇಂದು ರಸ್ತೆ ಬದಿಯ “ರೋಡ್ ರೇಜ್” ನೆಡೆಯುತ್ತಿರುವುದು. ನಾನು ಸರಿ, ನೀನು ಸರಿ ಎಂಬ ಅಹಂಕಾರದ ವರ್ತನೆಯೇ ಈ ಅವಘಡಗಳಕ್ಕೆ ಕಾರಣ.
ಚಿತ್ತ ಸಂಯಮ (Prescence of mind) :
ಒಬ್ಬ ವ್ಯಕ್ತಿಗೆ ಸಂಯಮದ ಸಂಪಾದನೆ ಸುಲಭದ ಮಾತಲ್ಲ. ಶ್ರದ್ಧೆ, ಜ್ಞಾನ (ಸ್ವ-ಅಧ್ಯಾಯ) ಮತ್ತು ಕರ್ತವ್ಯವಿದ್ದರೆ ಮಾತ್ರ ಈ ಸಂಯಮವನ್ನು ವೃದ್ಧಿಗೊಳಿಸಬಹುದು. ಸಂಯಮ ಮತ್ತು ಅಭ್ಯಾಸಗಳು ಉಪಯುಕ್ತ. ಸಂಯಮವನ್ನು ಕಾಣಬೇಕಾದರೆ ಧಾರಣನಾಗಬೇಕು, ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಧ್ಯಾನಭರಿತನಾಗಿರಬೇಕು. ಈ ಮನೋಮಾಪನವನ್ನು ವೃದ್ಧಿಸಿಕೊಂಡರೆ ಯಾವುದೇ ಸಮಯದಲ್ಲಿ ಘಾಸಿಗೊಳ್ಳದೆ ಎಂತಹ ಕಷ್ಟದ ಸಂಧರ್ಭದಲ್ಲೂ ನಿಭಾಯಿಸಿಕೊಳ್ಳಬಹುದು. ಇವುಗಳಿಂದ ಮನಸ್ಸಿನ ನೋವು ಹಾಗೂ ಖಿನ್ನತೆಗಳನ್ನು ದೂರ ಮಾಡಬಹುದು.
ಸಹಿಷ್ಣುತೆ (Patience) :
ಈ ಶತಮಾನ ವೇಗದ ಶತಮಾನ. ಎಲ್ಲವೂ ವೇಗವಾಗಿ ಆಗಬೇಕು. ಸಂಪಾದನೆಯಿಂದ ಹಿಡಿದು ರಾಕೇಟ್ನವರೆಗು. ಅಲ್ಪ ಸಮಯದಲ್ಲಿ ಬೇಗ ಮತ್ತು ಜಾಸ್ತಿ ಸಂಪತ್ತನ್ನು ಕೂಡಿಸಿಕೊಳ್ಳಬೇಕು. ಈ ಕಾರಣದಿಂದ ಮೋಸ, ದ್ರೋಹ, ನಂಬಿಕೆಹರಣಗಳಿಂದ ಅಶಾಂತಿ, ಖಿನ್ನತೆ, ಆತ್ಮಹತ್ಯೆ, ಕ್ರೌರ್ಯ, ಹತ್ಯೆ ಇತ್ಯಾದಿಗಳನ್ನು ಕಾಣುತ್ತಿದ್ದೇವೆ. ನಮ್ಮಲ್ಲಿ ಸಂಪತ್ತು ಇರಬಹುದು. ಆದರೆ ಜ್ಞಾನವು ನಿರಂತರ ಮತ್ತು ಯಾರದೇ ಸೊತ್ತು ಆಗಿರುವುದಿಲ್ಲ. ಈ ಜ್ಞಾನ ಎಲ್ಲರ ಸೊತ್ತು ಆಗುವುದಲ್ಲದೆ ಮನೋ ಉಲ್ಲಾಸಕ್ಕೆ ಮತ್ತು ಆತ್ಮವೃದ್ಧಿಗೆ ಒಂದು ಅತ್ಯಂತ ಪ್ರಾಮುಖ್ಯ ಮನೋಮಾಪನವಾಗಿ ಇರುತ್ತದೆ.
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

