ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಆತ್ಮಹತ್ಯೆ ಮತ್ತು ಪರಿಹಾರ
ದಿನಪತ್ರಿಕೆಯೊಂದರ ಮುಖಪುಟದಲ್ಲಿ ದಪ್ಪ ಅಕ್ಷರದಲ್ಲಿದ್ದ ಸುದ್ದಿಯೊಂದು ಪ್ರಕಟಗೊಂಡಿತ್ತು. ಅದೇನೆಂದರೆ, ವಿದ್ಯಾರ್ಥಿಯ ಆತ್ಮಹತ್ಯೆ. ಹದಿನೈದರ ಪ್ರಾಯದ ಹುಡುಗನೊಬ್ಬ ವಸತಿ ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅಲ್ಲೊಂದು ಪತ್ರ ಬರೆದಿಟ್ಟು ‘ನನ್ನ ಸಾವಿಗೆ ಗಣಿತದ ಶಿಕ್ಷಕರೇ ಕಾರಣ’ ಎಂದಿದ್ದ. ನನಗೆ ‘ಅನ್ಯಾಯವಾಗಿ ಹೋದೆಯಾ ಬಡ ಜೀವವೇ’ ಅನಿಸಿತು.
ಆ ಗಣಿತದ ಶಿಕ್ಷಕ ಈ ವಿದ್ಯಾರ್ಥಿಯ ಮನಸ್ಸನ್ನು ಅರಿತಿದ್ದರೆ ಇಂಥ ಅವಘಡ ಸಂಭವಿಸುತ್ತಿರಲಿಲ್ಲ ಅನಿಸುತ್ತದೆ. ಈ ಘಟನೆ ನನ್ನ ಮನವನ್ನು ಕಲಕಿತು. ಹಾಗಾಗಿ ನನ್ನಲ್ಲಿಗೆ ಬಂದು ಸಲಹೆ ಪಡೆದ ಒಂದೆರಡು ವಿದ್ಯಾರ್ಥಿಗಳ ಮಾನಸಿಕ ಒತ್ತಡ ಹಾಗೂ ಪೋಷಕರ ಅಸಹನೀಯ ಸ್ಥಿತಿಗಳನ್ನು ಓದುಗರ ಮುಂದೆ ಹಂಚಿಕೊಳ್ಳಬಯಸುತ್ತೇನೆ.
ಎರಡನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯನ್ನು ಅವರ ಶಾಲೆಯ ಮುಖ್ಯೋಪಾಧ್ಯಾಯರ ಸಲಹೆಯ ಮೇರೆಗೆ ನನ್ನಲ್ಲಿಗೆ ಕರೆ ತಂದಿದ್ದರು. ಸರ್ಕಾರಿ ನೌಕರಿಯ ಅಪ್ಪ, ಗೃಹಿಣಿಯಾದ ತಾಯಿಯರದು ಮಗನ ವಿರುದ್ಧ ದೂರೆಂದರೆ ಸಿಟ್ಟು, ಭಂಡತನ, ಗಮನ ಮತ್ತು ಏಕಾಗ್ರತೆ ಇಲ್ಲ. ಕೂತ ಕಡೆ ಕೂರುವುದಿಲ್ಲ, ನಿಂತಲ್ಲಿ ನಿಲ್ಲುವುದಿಲ್ಲ. ಬೈದರೂ, ಹೊಡೆದರೂ ಪ್ರಯೋಜನವಾಗಿಲ್ಲ. ಓದಿನಲ್ಲಿ ಆಸಕ್ತಿ ಇಲ್ಲದೆ ಎಲ್ಲದರಲ್ಲೂ ಕಡಿಮೆ ಅಂಕ, ತಾಳ್ಮೆ ಕಮ್ಮಿ, ಬೇಕು ಅನಿಸಿದ್ದು ಬೇಕೇಬೇಕೆಂದು ಹಠ ಹಿಡಿಯುವನು, ಸಹಪಾಠಿಗಳಿಗೆ ಹೆದರಿಸುವನು, ಹೊಡೆಯುವನು, ಗಿಂಟುವನು, ಪೆನ್ನು ಮತ್ತು ಪೆನ್ಸಿಲ್ನಿಂದ ಚುಚ್ಚುವನು, ಎಷ್ಟೋ ವೇಳೆ ಸ್ನೇಹಿತರ ತಲೆಯನ್ನು ಗೋಡೆಗೆ ಜಜ್ಜಿರುವುದೂ ಉಂಟು, ಗಾಯಗೊಳಿಸಿದ ನಂತರ ಏನೂ ಮಾಡಿಯೇ ಇಲ್ಲವೇನೋ ಎಂಬಂತೆ ನಡೆದುಕೊಳ್ಳುವನು. ಅಲ್ಲದೆ ಎಷ್ಟೋ ಬಾರಿ ಪ್ರಾಣಿಗಳಿಗೂ ಹಿಂಸೆ ಕೊಡುವನು. ಅಂದರೆ ನಾಯಿಗೆ ವಿನಾ ಕಾರಣ ಹೊಡೆಯುವುದು. ಬೆಕ್ಕನ್ನು ಹಿಸುಕುವುದು. ಇರುವ ಜಿರಲೆ ಓತಿಕೇತಗಳನ್ನು ಬರ್ಬರವಾಗಿ ಹತ್ಯೆ ಮಾಡುವನು.
ಸಹಪಾಠಿಗಳಿಂದ, ಸ್ನೇಹಿತರಿಂದ ಮತ್ತು ಅವರ ಪೋಷಕರಿಂದಲೂ ‘ಇವರೆ ಆ ಪೋಕರಿಯ ಹೆತ್ತವರು’ ಎಂಬ ಅಪಹಾಸ್ಯ ಮತ್ತು ದೂರಿನ ಸರಮಾಲೆ, ಅಪ್ಪನ ಮಾನಸಿಕ ಹಿಂಸೆ, ಅಮ್ಮನ ಅಳು. ಇವನ ತೊಂದರೆಯನ್ನೆಲ್ಲಾ ಮುಖ್ಯೋಪಾಧ್ಯಾಯರು ಅರಿತಿದ್ದರೂ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಂದ ಒತ್ತಡ ಹೆಚ್ಚಾಗಿ ವರ್ಗಾವಣೆ ಪತ್ರ ಕೊಟ್ಟು ಕಳುಹಿಸಲು ಎಷ್ಟೋ ಬಾರಿ ಚಿಂತಿಸಿದ್ದರೂ. ಆದರೂ ಮುಂದೊಂದು ದಿನ ಸರಿಹೋಗಬಹುದೇನೋ ಎಂಬ ಆಕಾಂಕ್ಷೆಯಿಂದ ಬಿಸಿ ತುಪ್ಪವನ್ನು ಬಾಯಿಯಲ್ಲಿಟ್ಟುಕೊಂಡಂತೆ, ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಸಮಾಧಾನಿಸಿ ಮುಖ್ಯೋಪಾಧ್ಯಾಯರು ಹೆಚ್ಚು ಬಲ್ಲವರಾಗಿದ್ದರಿಂದ ಕಾದು ನೋಡುವ ತಂತ್ರವನ್ನು ಅನುಸರಿಸಿದ್ದರು. ಇತ್ತ ಇವನ ಪೋಷಕರಿಂದ ‘ನಮ್ಮ ಮಗನ ಭವಿಷ್ಯ ನಿಮ್ಮ ಕೈಯಲ್ಲಿದೆ’ ಎಂಬ ಮನವಿಯೂ ಇದಕ್ಕೆ ಕಾರಣವಾಗಿತ್ತು.

ಈತನನ್ನು ಕೂಲಂಕುಶವಾಗಿ ಪರೀಕ್ಷಿಸಿದ ನಾನು ಇವನಲ್ಲಿ ಬುದ್ಧಿಮಾಂದ್ಯತೆ ಇಲ್ಲದಿರುವುದನ್ನು ಕಂಡುಕೊಂಡೆ. ಇವನಿಗೆ ಪಾಠ ಯಾಕೆ ಅರ್ಥವಾಗುತ್ತಿರಲಿಲ್ಲವೆಂದರೆ ಗಮನ ಮತ್ತು ಏಕಾಗ್ರತೆ ಇಲ್ಲದಿರುವುದರಿಂದ ಕಲಿಕೆಯಲ್ಲಿ ನ್ಯೂನತೆ ಇತ್ತು. ಚಡಪಡಿಸುವಿಕೆ, ಓದಿನಲ್ಲಿ ನಿರಾಸಕ್ತಿ, ಬೇರೆಯದರಲ್ಲಿ ಹೆಚ್ಚು ಆಸಕ್ತಿ, ಚೇಷ್ಟೆ ಮತ್ತು ತರ್ಲೆ ಗುಣ ಒಳಗೊಂಡ ಇವನು Attention deficit hyperkinetic syndrome ಎಂಬ ಕಾಯಿಲೆಯಿಂದ ಬಳಲುತ್ತಿರುವನು.
ಇಷ್ಟೇ ಆಗಿದ್ದಿದ್ದರೆ ಅಂತಹ ತೊಂದರೆಯೇನೂ ಆಗುತ್ತಿರಲಿಲ್ಲ. ಆದರೆ ಅವನ ಇನ್ನೊಂದು ಆಘಾತಕಾರಿ ತೊಂದರೆಯೆಂದರೆ ಈತನ Impulsive behaviour ನಿಂದ ಎಲ್ಲರಿಗೂ ಸಮಸ್ಯೆ. ಇವನು ಆ ಕ್ಷಣದಲ್ಲಿ ಏನು ಮಾಡುವನೆಂಬ ಪರಿಜ್ಞಾನವಿರುವುದಿಲ್ಲ. ಗೋಡೆಗೆ ಗುದ್ದುವುದು, ಎದೆಗೆ ಒದೆಯುವುದು, ಕಣ್ಣಿಗೆ ಮತ್ತು ಎಲ್ಲೆಂದರಲ್ಲಿಗೆ ಚುಚ್ಚುವುದು ಮತ್ತು ಜಡೆ ಹಿಡಿದು ಎಳೆಯುವುದು, ಸಹಪಾಠಿಗಳಿಗೆ ಹೆದರಿಸುವುದು. ಇವನ ವಿರುದ್ಧ ಶಿಕ್ಷಕರಿಗೆ ದೂರು ಹೇಳುತ್ತೇವೆಂದರೆ ಬೆದರಿಕೆ ಹಾಕುವನು. ಈ ಎಲ್ಲಾ ಲಕ್ಷಣವುಳ್ಳವನಿಗೆ ಮನೋವೈದ್ಯದಲ್ಲಿ Impulsive dyscontrol syndrome with conduct disorder ಅನ್ನುವರು. ಇದನ್ನು ನಿಯಂತ್ರಿಸುವುದು ಸ್ವಲ್ಪ ಕಷ್ಟದ ಕೆಲಸ. ಇದಕ್ಕೆ ನಿಗದಿತ ಔಷಧಿಗಳಿಲ್ಲ. ಎಲ್ಲವೂ Trial and Error ವಿಧಾನಕ್ಕೆ ಅಳವಡಿಸಬೇಕು.
ಇದಕ್ಕೆ ಮೊದಲನೆಯದಾಗಿ, ಪೋಷಕರಿಗೆ ಇವನ ತೊಂದರೆಯನ್ನು ಮನದಟ್ಟು ಮಾಡಿಕೊಡಬೇಕು. ಮನೋ ವಿಶ್ಲೇಷಣೆಯನ್ನು ನೀಡಬೇಕು. ಅವನಲ್ಲಿ ಅರಿವು ಮೂಡಿಸಬೇಕು. ಸಹಪಾಠಿಗಳು, ಅವರ ಪೋಷಕರು, ಶಿಕ್ಷಕ ವೃಂದ ಅವನಿಗೆ ಸಹಕರಿಸಬೇಕು. ಇದು ಸುಲಭದ ಮಾತಲ್ಲ. ಔಷಧಿಗಳಿಂದ ನಿದ್ರಾವಸ್ಥೆ, ವಾಕ್ಚಿಕಿತ್ಸೆ ಮತ್ತು ಸಲಹಾ ಪದ್ಧತಿಗಳಿಂದ ಇವನನ್ನು ನಿಯಂತ್ರಿಸಲು ಅಥವ ತಿದ್ದಲು ಸಹಾಯವಾಗುವುದು. ನಡವಳಿಕೆ, ಪರಿವರ್ತನಾ ಸಾಧನಗಳನ್ನು (Behavioural Therapy) ಅಳವಡಿಸಿದರೆ ಸ್ವಲ್ಪಮಟ್ಟಿಗೆ ಸಹಾಯವಾಗಬಹುದು.
ನೋಡಿ ಸ್ನೇಹಿತರೆ, ಪೋಷಕರ ಸಂಕಷ್ಟ, ಮುಖ್ಯೋಪಾಧ್ಯಾಯರ ಸಂದಿಗ್ಧ ಸ್ಥಿತಿ ಹಾಗೂ ಶಾಲೆಯಲ್ಲಿ ಆಗುವ ಸ್ಥಿತಿಗತಿಗಳನ್ನು.

ಇನ್ನೊಂದು ಘಟನೆಯನ್ನು ನೋಡಿ. ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಗನನ್ನು ಪೋಷಕರು ಮೊನ್ನೆ ಕರೆತಂದಿದ್ದರು. ಅವರ ಅಹವಾಲೆಂದರೆ * ಓದುವುದರಲ್ಲಿ ಹಿಂದೆ. * ಓದಿಕೋ ಎಂದು ಹೇಳಿದಾಗೆಲ್ಲ ತಲೆನೋವು ಎನ್ನುವನು. * ಸದಾ ಟಿ.ವಿ. ನೋಡುವುದರಲ್ಲಿ ಮಗ್ನನಾಗಿರುವನು. * ಮೊಬೈಲ್ನಲ್ಲಿ ಗೇಮ್ಸ್ ಮತ್ತು ವಿಡಿಯೋ ಗೇಮ್ಸ್ ಅಂದರೆ ಪಂಚಪ್ರಾಣ. * ಕೆಲವೊಮ್ಮೆ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವನು. * ಸದಾ ಉಗುರು ಕಚ್ಚುತ್ತಿರುತ್ತಾನೆ.
ಈ ತರಹದ ದೂರುಗಳು ಇವನ ಹಿನ್ನೋಟ ಗಮನಿಸಿದರೆ ಇಬ್ಬರಲ್ಲಿ ಹಿರಿಯ ಮಗ ಸಹಜ ಹೆರಿಗೆಯಲ್ಲಿ ಹುಟ್ಟಿ ಸಹಜವಾಗಿ ಬೆಳೆದಿದ್ದಾನೆ. ಮಧ್ಯಮ ಕುಟುಂಬದಿಂದ ಬಂದವನು. ಶಾಲೆಯಲ್ಲಿ ಎರಡನೇ ಬೆಂಚ್ನಲ್ಲಿ ಕೂರುತ್ತಾನಾದರೂ ಗಮನವನ್ನು ಕೇಂದ್ರೀಕರಿಸುವುದಿಲ್ಲ ಎಂಬುದು ಶಿಕ್ಷಕರ ಅಭಿಪ್ರಾಯ. ಒಳ್ಳೆಯ ಹುಡುಗ, ಯಾವುದೇ ರೀತಿಯ ಚೇಷ್ಟೆಗಳು, ತಂಟೆಗಳು ಇಲ್ಲ ಎಂದು ಸಹಪಾಠಿಗಳು ಮತ್ತು ಶಿಕ್ಷಕರೆಲ್ಲಾ ಹೇಳುತ್ತಾರೆ. ಪಾಠದ ಮೇಲೆ ಗಮನವಿದ್ದರೂ ತಕ್ಷಣ ಉತ್ತರಿಸಿದರೂ ಸ್ವಲ್ಪ ಸಮಯದ ನಂತರ ಏನೂ ಗೊತ್ತಿಲ್ಲ ಎನ್ನುವನು. ಚಿಕ್ಕ ಪ್ರಶ್ನೆಗಳಿಗೆ ನಿಧಾನವಾಗಿ ಉತ್ತರಿಸುವನಾದರೂ ದೊಡ್ಡ ಪ್ರಶ್ನೆಗಳನ್ನು ಅರ್ಥವೇ ಮಾಡಿಕೊಳ್ಳುವುದಿಲ್ಲ. ಶಾಲಾ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಶೇ. 2೦ ಅಂಕ ತೆಗೆದರೆ ಬೇರೆ ವಿಷಯಗಳಲ್ಲಿ ಸೊನ್ನೆ ತೆಗೆಯುತ್ತಾನೆ. ಇವನಿಗೆ ಬರಹವೆಂಬುದೇ ಇಲ್ಲ ಎಂದು ಅಳಲು ತೋಡಿಕೊಂಡರು.
ನಾನು ಈತನನ್ನು Cross sectional mental status examination ಗೆ ಅಳವಡಿಸಿದಾಗ * ನಿಧಾನ ಗತಿಯಲ್ಲಿ ಸುಲಭ ಉತ್ತರ. * ಲಜ್ಜೆ ಸ್ವಭಾವ, ಪ್ರಶ್ನೆಗಷ್ಟೇ, ಪ್ರತ್ಯುತ್ತರ. * ಗಮನವಿದ್ದರೂ ಅರ್ಥೈಸಿಕೊಳ್ಳುವುದರಲ್ಲಿ ನಿಧಾನ ಕಂಡು ಬಂದವು.
ವಿದ್ಯಾರ್ಥಿಯನ್ನು ಸಲಹಾ ಕೊಠಡಿಯಿಂದ ಹೊರ ಕಳಿಸಿ, ಪೋಷಕರನ್ನು ಕರೆಸಿದೆ. ತವಕದಲ್ಲಿದ್ದ ತಂದೆ ತಾಯಿಯವರಿಗೆ ನಿಮ್ಮ ಮಗನ ಬಗ್ಗೆ ಏನು ತಿಳಿದುಕೊಂಡಿದ್ದೀರಿ? ಎಂದೆ. ಆತನ ಬುದ್ಧಿಯಲ್ಲಿ ಮಂದವೆಂಬುದು ಅವರ ವಾದ. ಅವರ ಮುಗ್ಧತೆ ಮತ್ತು ಮೌಢ್ಯತೆಯನ್ನು ಅರಿತ ನಾನು, ಅವನನ್ನು ಮಂದ ಎಂದರೆ, ನಾನು ಮತ್ತು ನೀವು ಬುದ್ಧಿಮಂದರು ಅಷ್ಟೇ ಅಂದೆ.
‘ಮತ್ತೇ ತೊಂದರೆ…’ ಅಂದರು.

ಕಲಿಕೆಯಲ್ಲಿ ನ್ಯೂನತೆ ಇದೆ. ಕೊಂಚವೂ ಬುದ್ಧಿಮಂದತ್ವ ಇಲ್ಲ. ಹೊಡೆದರೆ, ಬೈದರೆ ಪರಿವರ್ತನೆಯಾಗುವುದಿಲ್ಲವೆಂದು ಮನೋ ವಿಶ್ಲೇಷಣೆ ಮತ್ತು ಸಲಹೆಯನ್ನು ನೀಡಿ ಇಂಥ ಮಗನನ್ನು ಪಡೆಯಲು ನೀವು ಪುಣ್ಯ ಮಾಡಿದ್ದೀರಿ. ಇವನಿಗೆ ಕೋಪವಿಲ್ಲ. ಮನೆ ಬಿಟ್ಟು ಹೋಗಿಲ್ಲ. ಯಾರಿಗೂ ತೊಂದರೆ ಕೊಟ್ಟಿಲ್ಲ. ಯಾವುದೇ ವ್ಯಸನಗಳಿಗೆ ಬಲಿಯಾಗಿಲ್ಲ ಎಂದೆ. ಕಾರಣ, ಇಂತಹ ಮಕ್ಕಳ ಮನೋಭಾವವು ಅವರ ಸ್ಥಿಮಿತದಲ್ಲಿರದೆ ಇರುವುದರಿಂದ ಅಡ್ಡದಾರಿ ಮತ್ತು ದುಶ್ಚಟದಿಂದ ಮನಸ್ಸಿಗೆ ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ. ಇವನಿಗೆ ಗಣಕ ಯಂತ್ರದಲ್ಲಿ ಆಸಕ್ತಿ ಇರುವುದರಿಂದ ಅದರ ಕಡೆಯೇ ಒಲವು ಕೊಡಲು ಸೂಚಿಸಿದೆ.
ಇಂತಹವರಲ್ಲಿ ಗ್ರಹಿಕೆಯ ಒಳ ಹರಿವಿನಿಂದ ಸಂಯೋಜನಾ ಘಟಕಕ್ಕೆ ಹೋಗುವ ನರ ರಚನೆಯ ನ್ಯೂನತೆ ಇರುವುದರಿಂದ ಮಂದಗತಿಯ ಸಂಯೋಜನೆಯೊಂದಿಗೆ ನಿಧಾನ ಗತಿಯ ನಡವಳಿಕೆ, ನುಡಿ ಹಾಗೂ ಬರಹವನ್ನು ಕಾಣುತ್ತೇವೆ. ಇದನ್ನು Perceptory dysphasia with dyscaluculia and dysgraphia ಎಂದು ಕರೆಯುವೆವು. ಈ ತೊಂದರೆಯು dyslexia ದ ಅಡಿ ಬರುವಂತಹ ನರ ರಚನೆಯ ನ್ಯೂನತೆ ಮೆದುಳಿನ ಕಾರ್ಯ ಹಾಗೂ ಕೌಶಲ್ಯವನ್ನು ವೃದ್ಧಿಗೊಳಿಸುವ ಮನೋ ಔಷಧಿಗಳು ಈಗ ಲಭ್ಯ. ಪೋಷಕರಿಗೆ ಶಿಕ್ಷಕರಿಗೆ, ಮನೋ ಸಲಹೆ counselling ಹಾಗೂ ವಾಕ್ ಚಿಕಿತ್ಸೆ psychotherapy ವಿಧಾನಗಳು ಈ ವ್ಯಾಧಿಯ ಚಿಕಿತ್ಸೆಗೆ ಪೂರಕವಾಗಬಹುದು.
ಶಿಕ್ಷಕರ ಹುರಿದುಂಬಿಸುವಿಕೆ, ಸಮಯಕ್ಕೆ ತಕ್ಕಂತೆ ಸಕಾರಾತ್ಮಕ ಮತ್ತು ನಕಾರಾತ್ಮಕ ಸಲಹೆಯನ್ನು ಕೊಟ್ಟರೆ ಇವನ ಮನೋ ಪರಿವರ್ತನೆಗೆ ದಾರಿಯಾಗುತ್ತದೆ ಹಾಗೂ ನಿಧಾನ ಗತಿಯಲ್ಲಿ ಶಿಕ್ಷಣವನ್ನು ವಿಶೇಷ ಕಾಳಜಿ ವಹಿಸಿ ನೀಡಿದರೆ ಅವನು ಬೇರೆಯವರ ಹಾಗೆ ಕಲಿಯುವುದರಲ್ಲಿ ಸಂದೇಹವಿಲ್ಲ. ಆದರೆ ನಮ್ಮ ಈಗಿನ ವ್ಯವಸ್ಥೆಯಲ್ಲಿ ಇದು ಸಾಧ್ಯವೆ? ವಿದ್ಯಾರ್ಥಿಗೆ ಸಮಯಕ್ಕೆ ಸರಿಯಾಗಿ ಮಾರ್ಗದರ್ಶನ ಸಿಕ್ಕಿದರೆ ಉಳಿಯುತ್ತಿದ್ದನೇನೋ? ನಿಂದನೆ, ಅಪಹಾಸ್ಯ, ಶಿಕ್ಷೆ ಮತ್ತು ನಾಲಾಯಕ್, ನಾಮರ್ಧ, ದಡ್ಡ ಎಂಬ ಬಿರುದುಗಳು ಆತನನ್ನು ಆತ್ಮಹತ್ಯೆಯ ಕಡೆ ವಾಲುವಂತೆ ಮಾಡಿದವು.
ಈ ಮೇಲಿನ ಲಕ್ಷಣಗಳುಳ್ಳ ವಿದ್ಯಾರ್ಥಿಗಳು, ಯುವಕರು ಸಾರ್ವಜನಿಕರ ಗಮನಕ್ಕೆ ಬಂದರೆ ಸೂಕ್ತ ಸಮಯದಲ್ಲಿ ಮನೋ ತಜ್ಞರ ಹತ್ತಿರ ಸಲಹೆ ಕೊಡಿಸಿದರೆ ಅಥವಾ ಹೋಗಲು ಸಲಹೆ ನೀಡಿದರೆ ಎಷ್ಟೋ ಅಮಾಯಕ ಮುಗ್ಧ ಜೀವಗಳು ಬದುಕುಳಿಯಬಲ್ಲವು. ಏನನ್ನಾದರೂ ಸಾಧಿಸಬಲ್ಲವು.
ಮುಂದುವರೆಯುವುದು…..!
– ಡಾ|| ಎ.ಎಂ. ನಾಗೇಶ್

