ನವದೆಹಲಿ: ಪಾಕಿಸ್ತಾನದ ಲಾಹೋರ್ನಲ್ಲಿ ಜೈಯಾನಾ ಟ್ರಾವೆಲ್ ಆಯಂಡ್ ಟೂರಿಸಂ ಎಂಬ ಸಂಸ್ಥೆಯನ್ನು ನಡೆಸುತ್ತಿರುವ ಮಹಿಳಾ ಉದ್ಯಮಿಗೆ ಭಾರತೀಯ ಸಾಮಾಜಿಕ ಜಾಲತಾಣಗಳ ಪ್ರಭಾವಿಗಳು ಟಾರ್ಗೆಟ್ ಆಗಿದ್ದರು. ಇವರನ್ನು ಸಂಪರ್ಕಿಸಿ ಪಾಕ್ ಪರ ಗೂಢಚಾರರನ್ನಾಗಿ ಬದಲಿಸಿ, ಭಾರತದಲ್ಲಿ 500 ಗೂಢಚಾರರ ಬೃಹತ್ ಜಾಲವನ್ನೇ ಸ್ಥಾಪಿಸುವ ಗುರಿಯನ್ನು ಹೊಂದಿದ್ದಳು ಎಂಬ ಆಘಾತಕಾರಿ ವಿಷಯ ಈಗ ಬಹಿರಂಗವಾಗಿದೆ.
ಅಲ್ಲದೆ, ಪಾಕ್ ಐಎಸ್ಐ ಈಕೆಗೆ “ಮೇಡಂ ಎನ್’ ಎಂಬ ಕೋಡ್ ನೇಮ್ ಅನ್ನು ಇಟ್ಟಿತ್ತು ಎಂದೂ ತಿಳಿದುಬಂದಿದೆ. ನೋಶಾಬಾ ಶೆಹಜಾದ್ ಎಂಬಾಕೆಯೇ ಈ ಪಾಕ್ ಉದ್ಯಮಿ. ಈಕೆಯ ಪತಿ ಪಾಕಿಸ್ತಾನಿ ನಾಗರಿಕ ಸೇವೆಗಳ ನಿವೃತ್ತ ಅ ಧಿಕಾರಿ. ಇತ್ತೀಚೆಗೆ ಬಂಧಿತಳಾದ ಜ್ಯೋತಿ ಮಲ್ಹೋತ್ರಾ ಸೇರಿದಂತೆ ಅನೇಕ ಪ್ರಭಾವಿಗಳು ಪಾಕಿಸ್ತಾನಕ್ಕೆ ಭೇಟಿ ನೀಡಲು ಸಹಾಯ ಮಾಡಿದ್ದು ಈಕೆಯೇ ಎಂಬುದು ಈಗ ತನಿಖೆ ವೇಳೆ ಗೊತ್ತಾಗಿದೆ.
ಸ್ಲೀಪರ್ ಸೆಲ್ ನೆಟ್ವರ್ಕ್ ಈಕೆಯ ಗುರಿ
ಶೆಹಜಾದ್ ಭಾರತದಲ್ಲಿ 500 ಗೂಢಚಾರರ ಬೃಹತ್ ಸ್ಲೀಪರ್ ಸೆಲ್ ನೆಟ್ವರ್ಕ್ ಸ್ಥಾಪಿಸಲು ಗುಪ್ತವಾಗಿ ಕೆಲಸ ಮಾಡುತ್ತಿದ್ದಳು. ಪಾಕ್ ಸೇನೆ ಮತ್ತು ಐಎಸ್ಐ ಈಕೆಗೆ ನಿರ್ದೇಶನಗಳನ್ನು ನೀಡುತ್ತಿತ್ತು. ಈಕೆ ಭಾರತೀಯ ಹಿಂದೂಗಳು ಮತ್ತು ಸಿಖ್ಖರನ್ನು ಆಕರ್ಷಿಸಿ ಕಳೆದ 6 ತಿಂಗಳಲ್ಲಿ 3,000 ಭಾರತೀಯರು ಮತ್ತು 1,500 ಎನ್ಆರ್ಐಗಳನ್ನು ಸಂಪರ್ಕಿಸಿದ್ದಲ್ಲದೆ, ಅವರಿಗೆ ಪಾಕ್ ವೀಸಾ ನೀಡಲು ಸಹಕರಿಸಿದ್ದಾಳೆ ಎಂದು ಗೊತ್ತಾಗಿದೆ.
ಒಂದೇ ಕರೆಗೆ ವೀಸಾ ಲಭ್ಯ!
ದೆಹಲಿಯ ಪಾಕಿಸ್ತಾನಿ ರಾಯಭಾರ ಕಚೇರಿಯ ವೀಸಾ ವಿಭಾಗದ ಅ ಧಿಕಾರಿಗಳೊಂದಿಗೆ ಶೆಹಜಾದ್ ನೇರ ಸಂಪರ್ಕ ಹೊಂದಿದ್ದು, ಈಕೆ ಒಂದು ಕರೆ ಮಾಡಿದರೆ ಸಾಕು, ಪ್ರವಾಸಿ ವೀಸಾಗಳು ಸುಲಭವಾಗಿ ದೊರೆಯುತ್ತಿದ್ದವು.
ನೋಶಾಬಾ ಟೂರಿಸಂ ಕಂಪನಿಗೆ ಐಎಸ್ಐ ಸಹಾಯ?
ಇವರ ಟೂರಿಸಂ ಕಂಪನಿಯು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ನ ಸಹಯೋಗದೊಂದಿಗೆ ಪಾಕಿಸ್ತಾನಕ್ಕೆ ಸಿಖ್ ಮತ್ತು ಹಿಂದೂ ತೀರ್ಥಯಾತ್ರೆಗಳ ಪ್ಯಾಕೇಜ್ ಟ್ರಿಪ್ ಅನ್ನು ಆಯೋಜಿಸುವ ಏಕೈಕ ಏಜೆನ್ಸಿಯಾಗಿದೆ. ಪಾಕಿಸ್ತಾನಿ ಸೇನೆ ಮತ್ತು ಐಎಸ್ಐನೊಂದಿಗಿನ ಸಂಪರ್ಕದಿಂದಾಗಿಯೇ ಈ ಅನುಕೂಲವನ್ನು ಮಾಡಿಕೊಡಲಾಗಿದೆ ಎನ್ನಲಾಗುತ್ತಿದೆ.
