ಬೆಂಗಳೂರು, ಅ. 7: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಎ. ಶಂಕರ್ನನ್ನು ನಕಲಿ ಸುಪ್ರೀಂ ಕೋರ್ಟ್ ಆದೇಶದ ಆಧಾರದ ಮೇಲೆ ಬಿಡುಗಡೆ ಮಾಡಿಸಿದ ಪ್ರಕರಣದ ತನಿಖೆ ಮುಂದುವರಿದಂತೆ ಹಲವು ಗಂಭೀರ ಆರೋಪಗಳು ಬಹಿರಂಗವಾಗುತ್ತಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪರಪ್ಪನ ಅಗ್ರಹಾರ ಜೈಲಿನ ಮಾಜಿ ಡಿಐಜಿ ಸೋಮಶೇಖರ್ ಹಾಗೂ ಜೈಲು ಸಿಬ್ಬಂದಿ ಶ್ರೀಕಾಂತ್ ವಿರುದ್ಧ ನಕಲಿ ದಾಖಲೆ ಸೃಷ್ಟಿ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿವೆ. ತನಿಖೆಯ ವೇಳೆ ಶಂಕರ್ ಪತ್ನಿಯೊಂದಿಗೆ ಮಾಜಿ ಡಿಐಜಿ ಸೋಮಶೇಖರ್ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ವಿಡಿಯೋ ಕಾಲ್ ಮಾಡುತ್ತಿದ್ದ ಆರೋಪ
ತನಿಖೆಯ ಪ್ರಕಾರ, ಸೋಮಶೇಖರ್ ಅವರು ಶಂಕರ್ ಪತ್ನಿಗೆ ಪದೇಪದೇ ವಿಡಿಯೋ ಕಾಲ್ ಮಾಡುತ್ತಿದ್ದರು ಎನ್ನಲಾಗಿದ್ದು, ಆ ಸಂದರ್ಭದಲ್ಲಿ ಅಸಭ್ಯವಾಗಿ ವರ್ತಿಸುವಂತೆ ಒತ್ತಾಯಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ತನಿಖೆಯ ಭಾಗವಾಗಿ ಸೋಮಶೇಖರ್ ಅವರ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಇತರ ಮಹಿಳೆಯರೊಂದಿಗೂ ಸಂಪರ್ಕದ ಆರೋಪ
ಶಂಕರ್ ಪತ್ನಿಯ ಹೊರತಾಗಿಯೂ ಜೈಲಿನಲ್ಲಿದ್ದ ಕೈದಿಗಳನ್ನು ಭೇಟಿಯಾಗಲು ಬರುತ್ತಿದ್ದ ಕೆಲವು ಮಹಿಳೆಯರೊಂದಿಗೆ ಮಾಜಿ ಡಿಐಜಿ ಸಂಪರ್ಕ ಹೊಂದಿದ್ದರು ಹಾಗೂ ಅವರನ್ನು ದುರುಪಯೋಗಪಡಿಸಿಕೊಂಡಿದ್ದರು ಎಂಬ ಆರೋಪಗಳೂ ತನಿಖೆಯ ವೇಳೆ ಕೇಳಿಬಂದಿವೆ ಎಂದು ತಿಳಿದುಬಂದಿದೆ.
ಪತಿಯ ಎರಡನೇ ಮದುವೆಯಿಂದ ಪ್ರಕರಣಕ್ಕೆ ತಿರುವು
ಜೈಲಿನಿಂದ ಬಿಡುಗಡೆಯಾದ ಬಳಿಕ ಶಂಕರ್ ತನ್ನ ಮೊದಲ ಪತ್ನಿಯನ್ನು ತೊರೆದು ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಮೊದಲ ಪತ್ನಿ ತನ್ನ ಆಪ್ತರ ಬಳಿ ಪ್ರಕರಣದ ಕುರಿತು ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾಳೆ ಎನ್ನಲಾಗಿದ್ದು, ಬಳಿಕ ನಕಲಿ ಆದೇಶದ ಮೂಲಕ ಶಂಕರ್ ಬಿಡುಗಡೆ ಮಾಡಿಸಿದ ಪ್ರಕರಣ ಮತ್ತಷ್ಟು ಮುನ್ನೆಲೆಗೆ ಬಂದಿದೆ.
ಅನಾಮಧೇಯ ಪತ್ರದಿಂದ ಪ್ರಕರಣ ಬಯಲು
ಶಂಕರ್ ಬಿಡುಗಡೆಯ ಕುರಿತು ಕಾರಾಗೃಹ ಇಲಾಖೆಯ ಡಿಜಿಪಿಗೆ ಅನಾಮಧೇಯ ಪತ್ರವೊಂದು ಬಂದಿತ್ತು. ಪತ್ರದಲ್ಲಿದ್ದ ಆರೋಪಗಳ ಆಧಾರದ ಮೇಲೆ ಇಲಾಖೆ ತನಿಖೆ ಆರಂಭಿಸಿದಾಗ ನಕಲಿ ಸುಪ್ರೀಂ ಕೋರ್ಟ್ ಆದೇಶದ ಮೂಲಕ ಕೈದಿಯನ್ನು ಬಿಡುಗಡೆ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಂಕರ್ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಎಂದು ತಿಳಿದುಬಂದಿದೆ.
ನಕಲಿ ಆದೇಶ ಸೃಷ್ಟಿಸಲು ಸೂಚನೆ ನೀಡಿದ ಆರೋಪ
2018ರಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಧಿಕಾರಿಯಾಗಿದ್ದ ಸೋಮಶೇಖರ್ ಅವರು ಸಜಾ ಬಂಧಿಗಳ ವಿಭಾಗದ ಎಸ್ಡಿಎ ಸಿಬ್ಬಂದಿಯಾಗಿದ್ದ ಶ್ರೀಕಾಂತ್ಗೆ ನಕಲಿ ದಾಖಲೆ ಸಿದ್ಧಪಡಿಸುವಂತೆ ಸೂಚಿಸಿದ್ದರು ಎನ್ನಲಾಗಿದೆ. ಅದರಂತೆ ಶ್ರೀಕಾಂತ್ ಸುಪ್ರೀಂ ಕೋರ್ಟ್ ಆದೇಶದ ಮಾದರಿಯಲ್ಲಿ ನಕಲಿ ದಾಖಲೆ ಸಿದ್ಧಪಡಿಸಿದ್ದು, ಅದನ್ನು ಆಧಾರವಾಗಿಸಿಕೊಂಡು ಶಂಕರ್ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು ಎಂಬ ಆರೋಪವಿದೆ.
ಈ ಪ್ರಕರಣದಲ್ಲಿ ನಕಲಿ ನ್ಯಾಯಾಲಯದ ಆದೇಶ ಸೃಷ್ಟಿ, ಅಧಿಕಾರದ ದುರುಪಯೋಗ ಹಾಗೂ ಇತರ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಪ್ರಕರಣದ ಸಂಪೂರ್ಣ ಚಿತ್ರಣ ಸ್ಪಷ್ಟವಾಗುವ ನಿರೀಕ್ಷೆಯಿದೆ.
