ಆಲೂರು: ತಾಲ್ಲೂಕಿನ ಮಗ್ಗೆ ಗ್ರಾಮ ಪಂಚಾಯಿತಿಗೊಳಪಡುವ ಮಠದಕೊಪ್ಪಲು, ನವಿಲಹಳ್ಳಿ ಮತ್ತು ಬಡಗಿಪುರ ಗ್ರಾಮದ ಪುರುಷರು, ಮಹಿಳೆಯರು ಸೇರಿದಂತೆ ಸುಮಾರು 30 ಜನರು ಇಸ್ರೇಲ್ ನಲ್ಲಿ ಹೋಂ ಟೇಕರ್ ಕೆಲಸಕ್ಕೆ ಹೋಗಿದ್ದಾರೆ.
ಸದ್ಯ ಇರಾಕ್ ಮತ್ತು ಇಸ್ರೇಲ್ ಮದ್ಯೆ ಯುದ್ಧ ನಡೆಯುತ್ತಿರುವುದರಿಂದ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದರೂ ಆಗಾಗ ಫೋನ್ ಮೂಲಕ ಮಾತನಾಡುತ್ತಿರುವುದರಿಂದ ಧೈರ್ಯವಾಗಿದ್ದಾರೆ ಎನ್ನುತ್ತಾರೆ ಕುಟುಂಬಸ್ಥರು.
ಸುಮಾರು 9 ವರ್ಷಗಳಿಂದ ಇಲ್ಲಿನ ನಿವಾಸಿಗಳು ಇಸ್ರೇಲ್ ದೇಶದ ಅಶ್ಮದ್ ಮತ್ತು ಇತರೆ ಸ್ಥಳಗಳಲಿ ಹೋಂ ಟೇಕರ್ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಬಾರಿ ಯುದ್ಧ ನಡೆದ ಸಂದರ್ಭದಲ್ಲಿ 21 ಜನರು ಇಸ್ರೇಲ್ನಲ್ಲಿದ್ದರು. ಮೂರು ವರ್ಷಗಳಿಂದೀಚೆಗೆ 9 ಜನರು ಹೋಗಿದ್ದಾರೆ.
“ನನ್ನ ಪತ್ನಿ ಅನ್ಸಿಲಾ ಇಸ್ರೇಲ್ ದೇಶದ ಅಶ್ಮದ್ ಪ್ರದೇಶದ ಮನೆಯೊಂದರಲ್ಲಿ ಹೋಂ ಟೇಕರ್ ಕೆಲಸದಲ್ಲಿದ್ದಾರೆ. ಮೊದಲು ಎಲ್ಲ ಸಂದರ್ಭದಲ್ಲೂ ಮಾತನಾಡುತ್ತಿದ್ದರು. ಯುದ್ಧದ ಪರಿಸ್ಥಿತಿ ನಿರ್ಮಾಣವಾದ ನಂತರ, ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ 11 ಗಂಟೆಗೆ ಮಾತನಾಡುತ್ತಾರೆ. ಯುದ್ಧಕ್ಕೆ ಸಂಬಂಧಿಸಿದಂತೆ ಸೈರನ್ ಕೂಗು ಕೇಳಿಸುತ್ತದೆಯಲ್ಲದೆ ಮೊಬೈಲ್ಗೆ ಮೆಸೇಜ್ ಬರುತ್ತದೆ. ಆಗ ರಕ್ಷಣೆಗಾಗಿ ತಕ್ಷಣ ಬಂಕರ್ಗೆ ಹೋಗಿ ಸೇರಿಕೊಳ್ಳುತ್ತಾರೆ. ಹೊರಗಡೆ ಯಾರೂ ತಿರುಗಾಡದಂತೆ ನಿಷೇಧ ಹೇರಿದ್ದಾರೆ ಎಂದು ಪತ್ನಿ ತಿಳಿಸಿದ್ದಾರೆ. ಸದ್ಯಕ್ಕೆ ಯಾವುದೆ ಆತಂಕಪಡುವಂತಿಲ್ಲ ಎಂದು ಪತ್ನಿ ತಿಳಿಸಿದ್ದಾರೆ”.
– ಸ್ಟ್ಯಾನಿ, ನವಿಲಹಳ್ಳಿ.
