ಲಿಡ್ಸ್: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ದಿಗ್ಗಜ ಕ್ರಿಕೆಟಿಗರ ಅನುಪಸ್ಥಿತಿ ನಡುವೆಯೂ ಹೊಸ ಇತಿಹಾಸ ಸೃಷ್ಟಿಸುವ ಗುರಿ ಇಟ್ಟುಕೊಂಡಿರುವ ಭಾರತ ತಂಡ ಶುಕ್ರವಾರದಿಂದ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದೆ. 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಶುಭಾರಂಭ ಮಾಡುವ ಗುರಿ ಇಟ್ಟುಕೊಂಡಿರುವ ಉಭಯ ತಂಡಗಳು ಮೊದಲ ಟೆಸ್ಟಸ್ಟ್ ಪಂದ್ಯಕ್ಕೆ ಸಜ್ಜಾಗಿವೆ.
5 ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಲೀಡ್ಸ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಈ ವರೆಗೂ ಭಾರತದ ಆಧಾರಸ್ತಂಭವಾಗಿದ್ದ ವಿರಾಟ್, ರೋಹಿತ್, ಆರ್.ಅಶ್ವಿನ್ ಸದ್ಯ ನಿವೃತ್ತಿಯಾಗಿದ್ದಾರೆ. ಈಗ ಇರುವುದು ಹೊಸ ತಂಡ, ಹೊಸ ನಾಯಕ. ಒಂದೆಡೆ ಶುಭ್ಮನ್ ಗಿಲ್ ನಾಯಕತ್ವದ ಚುಕ್ಕಾಣಿ ಹಿಡಿದು ತಂಡವನ್ನು ಮುನ್ನಡೆಸಲಿದ್ದು, ಮತ್ತೊಂದೆಡೆ ಕೆಲ ಯುವ ಪ್ರತಿಭೆಗಳು ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ವಿಶ್ವಾಸದಲ್ಲಿದ್ದಾರೆ. 45 ದಿನಗಳ ಸುದೀರ್ಘ ಸರಣಿ ಬಳಿಕ ಟ್ರೋಫಿಯನ್ನು ಭಾರತಕ್ಕೆ ಹೊತ್ತುತರುವ ಹೊಣೆಗಾರಿಕೆ ಯಂಗ್ ಇಂಡಿಯಾ ಮೇಲಿದೆ.
ಆಯ್ಕೆ ಗೊಂದಲ: ಕೆಲ ಆಟಗಾರರ ನಿವೃತ್ತಿಯಿಂದಾಗಿ ತಂಡದಲ್ಲಿ ಬದಲಾವಣೆ ಸಹಜ. ಆಟಗಾರರ ಆಯ್ಕೆ ಗೊಂದಲವಿದ್ದು, ಬ್ಯಾಟಿಂಗ್ ಕ್ರಮಾಂಕದಲ್ಲೂ ಕುತೂಹಲವಿದೆ. ಕೆ.ಎಲ್.ರಾಹುಲ್-ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಆಡಲಿದ್ದು, ನಾಯಕ್ ಶುಭ್ಮನ್ ಗಿಲ್ 4ನೇ, ಉಪನಾಯಕ ರಿಷಭ್ ಪಂತ್ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಉಳಿದಂತೆ 3 ಹಾಗೂ 6ನೇ ಕ್ರಮಾಂಕದ ಆಟಗಾರರ ಬಗ್ಗೆ ಟಾಸ್ ವೇಳೆ ಉತ್ತರ ಸಿಗಲಿದೆ. 3ನೇ ಕ್ರಮಾಂಕಕ್ಕೆ ಸಾಯಿ ಸುದರ್ಶನ್ ಆಯ್ಕೆಯಾದರೆ, ಕರುಣ್ ನಾಯರ್ 6ನೇ ಕ್ರಮಾಂಕದಲ್ಲಿ ಆಡಬೇಕಾಗಬಹುದು. ಅಥವಾ ಕರುಣ್ರನ್ನು 3ನೇ ಕ್ರಮಾಂಕದಲ್ಲಿ ಆಡಿಸಿ, ಹೆಚ್ಚುವರಿ ವೇಗದ ಬೌಲಿಂಗ್ ಆಲ್ರೌಂಡರ್ಗಳಾಗಿ ಶಾರ್ದೂಲ್ ಹಾಗೂ ನಿತೀಶ್ ಕುಮಾರ್ ಇಬ್ಬರನ್ನೂ ಆಡಿಸಿದರೂ ಅಚ್ಚರಿಯಿಲ್ಲ.
ಜಡೇಜಾ 7ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಹೆಚ್ಚು. ಉಳಿದಂತೆ ಹೆಚ್ಚುವರಿ ಸ್ಪಿನ್ನರ್ ಆಡಿಸಲಾಗುತ್ತದೆಯೋ ಅಥವಾ ಮೂವರು ತಜ್ಞ ವೇಗಿಗಳನ್ನು ಕಣಕ್ಕಿಳಿಸಲಾಗುತ್ತೆಯೋ ಎಂಬ ಕುತೂಹಲವಿದೆ. ಬೂಮ್ರಾ, ಮೊಹಮದ್ ಸಿರಾಜ್ ಜೊತೆ ಪ್ರಸಿದ್ಧ್ ಕೃಷ್ಣ ಸ್ಥಾನ ಗಿಟ್ಟಿಸಿಕೊಳ್ಳಬಹುದು.
ಆತ್ಮವಿಶ್ವಾಸದಲ್ಲಿ ಇಂಗ್ಲೆಂಡ್: ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ತಂಡದಲ್ಲಿ ಅನುಭವಿಗಳು ಹೆಚ್ಚಿದ್ದು, ತವರಿನ ಕ್ರೀಡಾಂಗಣದ ಲಾಭವನ್ನೂ ಪಡೆಯಲಿದೆ. ಹೀಗಾಗಿ ತುಂಬು ಆತ್ಮವಿಶ್ವಾಸದಿಂದಲೇ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. 36 ಶತಕ ಒಳಗೊಂಡ 13000+ ರನ್ಗಳ ಸರದಾರ ಜೋ ರೂಟ್ ಬ್ಯಾಟಿಂಗ್ ಆಧಾರಸ್ತಂಭ. ಜ್ಯಾಕ್ ಕ್ರಾವ್ಲಿ, ಓಲಿ ಪೋಪ್, ಹ್ಯಾರಿ ಬ್ರೂಕ್, ಬೆನ್ ಡಕೆಟ್, ಜೆಮೀ ಸ್ಮಿತ್ ಕೂಡಾ ಬ್ಯಾಟಿಂಗ್ನಲ್ಲಿ ತಂಡಕ್ಕೆ ನೆರವಾಗಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಕ್ರಿಸ್ ವೋಕ್ಸ್ ಜೊತೆ ಬ್ರೈಡನ್ ಕಾರ್ಸ್, ಜೋಶ್ ಟಂಗ್, ಶೊಐಬ್ ಬಶೀರ್ ಭಾರತವನ್ನು ಕಾಡಲು ಸಜ್ಜಾಗಿದ್ದಾರೆ.
