ಶ್ಲೋಕ – 23
ಯಃ ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ ।
ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಮ್ ॥೨೩॥
ಯಃ ಶಾಸ್ತ್ರವಿಧಿಮ್ ಉತ್ಸೃಜ್ಯ ವರ್ತತೇ ಕಾಮಕಾರತಃ ।
ನ ಸಃ ಸಿದ್ಧಿಮ್ ಅವಾಪ್ನೋತಿ ನ ಸುಖಂ ನ ಪರಾಂ ಗತಿಮ್ –ಶಾಸ್ತ್ರದ ಕಟ್ಟಳೆಯನ್ನು ಮೀರಿ ಇಷ್ಟಬಂದಂತೆ ನಡೆವವನು ಸಿದ್ಧಿಯನ್ನು ಪಡೆಯಲಾರ. ಅವನಿಗೆ ಸುಖವಿಲ್ಲ; ಪರಮಗತಿಯೂ ಇಲ್ಲ.
ನಾವು ಶಾಸ್ತ್ರದ ಕಟ್ಟಳೆಯನ್ನು ಬಿಟ್ಟು ನಮ್ಮಷ್ಟಕ್ಕೆ ನಾವು ಪ್ರಾಮಾಣಿಕವಾಗಿ ಬದುಕಲು ಸಾಧ್ಯವಿಲ್ಲ. ಏಕೆಂದರೆ ನಮಗೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಪರಿಜ್ಞಾನವಿರುವುದಿಲ್ಲ. ನಮಗೆ ಇಷ್ಟವಾದುದು ಸರಿ ಎಂದು ನಾವು ತಿಳಿದುಕೊಳ್ಳುತ್ತೇವೆ. ನಮಗೆ ಯಾವುದು ತಿಳುವಳಿಕೆ ಕೊಡುತ್ತವೋ ಅವು ಶಾಸ್ತ್ರಗಳು. ಜಗತ್ತಿನ ಅನೇಕ ಸಂಗತಿಗಳನ್ನು ನಮ್ಮ ಅನುಷ್ಠಾನದಲ್ಲಿ ಅಳವಡಿಸಿಕೊಳ್ಳಲು ಕೇವಲ ಆತ್ಮಶಕ್ತಿ ಮತ್ತು ಪ್ರಾಮಾಣಿಕತೆ ಸಾಲದು. ಇದು ಸರಿ ಇದು ತಪ್ಪು ಎಂದು ತೀರ್ಮಾನ ಮಾಡಲು ಶಾಸ್ತ್ರಗಳು ಬೇಕೇ ಬೇಕು. ನಾವು ನಮ್ಮ ಅನುಭವದಿಂದ ಇಡೀ ಪ್ರಪಂಚವನ್ನು ಗ್ರಹಿಸಲು ಸಾಧ್ಯವಿಲ್ಲ. ನಮ್ಮ ಬುದ್ಧಿ ಸೀಮಿತ, ನಮ್ಮ ತರ್ಕ ಸೀಮಿತ, ನಮ್ಮ ಆತ್ಮಸಾಕ್ಷಿ ಸೀಮಿತ, ನಮ್ಮ ಪ್ರಾಮಾಣಿಕತೆ ಸೀಮಿತ. ಹಾಗಾಗಿ ನಾವು ಸೀಮಿತವಾದ ಅನುಭವದಿಂದ ಇಡೀ ವಿಶ್ವದ ಸತ್ಯವನ್ನು ತಿಳಿಯಲು ಸಾಧ್ಯವಿಲ್ಲ. ಈ ಕಾರಣದಿಂದ ಭಗವಂತ; ಆತ ಜಗತ್ತಿಗೆ ಕೊಟ್ಟ ವೇದಾದಿ ಶಾಸ್ತ್ರಗಳು; ಆ ಶಾಸ್ತ್ರವನ್ನು ಅರ್ಥಮಾಡಿಕೊಂಡು ನಮಗೆ ತಿಳಿ ಹೇಳಿದ ದೇವರನ್ನು ಬಲ್ಲ ಜ್ಞಾನಿಗಳು-ಇವರಿಂದ ನಾವು ನಿಜವನ್ನು ಅರಿಯಬೇಕು. ಇಲ್ಲದಿದ್ದರೆ ಸಿದ್ಧಿ ಸಾಧ್ಯವಿಲ್ಲ.
