ಕೆ.ಆರ್.ಪೇಟೆ: ದೇಶವನ್ನು ನಾಶಪಡಿಸಲು ಬಾಂಬ್ಗಳು ಬೇಕಾಗಿಲ್ಲ. ಮಾದಕ ವಸ್ತುಗಳೇ ರಾಷ್ಟ್ರವೊಂದನ್ನು ಸರ್ವನಾಶ ಮಾಡುವಷ್ಟು ಅಪಾಯಕಾರಿಯಾಗಿವೆ ಎಂದು ಶ್ರೀ ಕ್ಷೆತ್ರ ಧರ್ಮಸ್ಥಳ ಜನಜಾಗೃತಿ ಚನ್ನರಾಯಪಟ್ಟಣ ಜಿಲ್ಲಾ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಆರ್ ಟಿ ಓ ಮಲ್ಲಿಕಾರ್ಜುನ್ ತಿಳಿಸಿದರು.
ಪಟ್ಟದ ಸರ್ಕಾರಿ ಪದವಿಪೂರ್ವ ಕಾಲೇಜು ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ವಿಶ್ವದ ಪ್ರತಿ ರಾಷ್ಟ್ರಗಳಿಗೂ ಮಾದಕವಸ್ತು ಜಾಲ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇದರಲ್ಲಿ ಶ್ರೀಮಂತ, ಬಡ ದೇಶ ಎಂಬ ಭಿನ್ನತೆ ಇಲ್ಲ. ಇದೊಂದು ಕತ್ತಲ ಪ್ರಪಂಚವಾಗಿದ್ದು, ಯುವ ಸಮೂಹ ಜಾಗೃತವಾಗುವ ಅಗತ್ಯವಿದೆ. ದುಶ್ಚಟಗಳಿಂದ ದೂರವಿರುವ ಸಂಕಲ್ಪ ಮಾಡಿದರೆ ಯುವ ಪೀಳಿಗೆ ಬದುಕು ಸ್ವಾಸ್ಥ್ಯದಿಂದ ಕೂಡಿರುತ್ತದೆ. ಇಂದಿನ ಯುವಜನತೆ ಒಳ್ಳೆಯ ಹವ್ಯಾಸಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ನಾಗರೀಕನಾಗಿ ಹೊರಹೊಮ್ಮಬೇಕು. ದುಶ್ಚಟಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ವಿದ್ಯಾರ್ಥಿ ಜೀವನದಲ್ಲಿ ದುಶ್ಚಟ ದುರಭ್ಯಾಸದ ದಾಸರಾಗದೇ ತಂದೆ ತಾಯಿಯವರು ಕಂಡಿರುವ ಕನಸನ್ನು ನನಸು ಮಾಡಲು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಈ ಸಮಾಜದಲ್ಲಿ ಸತ್ಪಜೆಯಾಗಿ ಬಾಳಿದಾಗ ಮಾತ್ರ ಪೂಜ್ಯ ಧರ್ಮಾಧಿಕಾರಿಗಗಳಾದ ಡಾ. ಡಿ ವೀರೇಂದ್ರಹೆಗ್ಗಡೆ ಮಾತೃ ಶ್ರೀ ಡಾ:ಹೇಮಾವತಿ ಕನಸಿನ ಕಾರ್ಯಕ್ರಮಕ್ಕೆ ಅರ್ಥಪೂರ್ಣವಾಗುತ್ತದೆ ಎಂದು ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.

ಶ್ರೀ ಕ್ಷೆತ್ರದ ಧರ್ಮಸ್ಥಳ ಯೋಜನಾಧಿಕಾರಿ ತಿಲಕ್ ರಾಜ್ ಮಾತನಾಡಿ, ಪ್ರಪಂಚದ ಹಲವು ಭೀಕರ ಬರ್ಭರ ಕಾಯಿಲೆಯಲ್ಲಿ ದುಶ್ಚಟ ದುರಭ್ಯಾಸವು ಒಂದು.ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ತಾನು ಮಾತ್ರ ನರಕ ಯಾತನೆ ಅನುಭವಿಸಿದರೆ, ದುಶ್ಚಟ ಇರುವ ವ್ಯಕ್ತಿಯ ಮನೆಯಲ್ಲಿ ಎಲ್ಲರೂ ನರಕಯಾತನೆ ಅನುಭವಿಸಬೇಕಾಗುತ್ತದೆ. ಇಂತಹ ದುಶ್ಚಟದ ದಾಸರಾಗದೇ ಜೀವನದಲ್ಲಿ ಉನ್ನತ ಸಾಧನೆ ಮಾಡಿ ಈ ಸಮಾಜಕ್ಕೆ ಕೀರ್ತಿ ತರುವಂತಹ ವ್ಯಕ್ತಿಗಳು ನೀವಾಗಬೇಕು. ಮದ್ಯಮುಕ್ತ ಸಮಾಜ ನಿರ್ಮಾಣ ಮದ್ಯದಂಗಡಿಗಳನ್ನು ಬಂದ್ ಮಾಡಿದರೆ ಸಾಧ್ಯವಿಲ್ಲ. ಮದ್ಯವ್ಯಸನಿಯ ಮನಪರಿವರ್ತನೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿ ಕಾಲೇಜು ಮಕ್ಕಳಿಗೆ ಮಾದಕ ವಸ್ತು ವಿರೋಧಿ ಬಗ್ಗೆ ಪ್ರತಿಜ್ಞೆ ಬೋಧಿಸಿದರು.
ಇದನ್ನು ಓದಿ :- ಕೆ.ಆರ್.ಪೇಟೆ- “ಮಹಾನಗರಕ್ಕೆ ಅಡಿಪಾಯ ಹಾಕಿದ ಕೆಂಪೇಗೌಡರ ದೂರದೃಷ್ಟಿ ಸ್ಮರಣೀಯ”
ಬಳಿಕ ಮಾತನಾಡಿದ ಸಂಪನ್ಮೂಲ ವ್ಯಕ್ತಿಗಳಾದ ವಕೀಲ ಹೊನ್ನೇನಹಳ್ಳಿ ರವಿ ಕುಮಾರ್ ವಿಶ್ವದಾದ್ಯಂತ ಈ ದುಶ್ಚಟಗಳಿಗೆ ಮಕ್ಕಳು ಮತ್ತು ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆ ಕಾನೂನ ಬಾಹಿರ ಎಂದು ಗೊತ್ತಿದ್ದರೂ ಇದರ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಡ್ರಗ್ ಮಾಫಿಯಾ ಹತೋಟಿಗೆ ತರಲು ವಿಶ್ವದೆಲ್ಲೆಡೆ ಕಾನೂನು ಪ್ರಯತ್ನಗಳು ನಡೆಯುತ್ತಿವೆ. ಆದರೆ ಇದನ್ನು ಬುಡ ಸಮೇತ ಕಿತ್ತು ಹಾಕಲು ಸಾಧ್ಯವಾಗಿಲ್ಲ. ಪ್ರತಿಯೊಬ್ಬ ನಾಗರಿಕನೂ ಈ ಬಗ್ಗೆ ಜಾಗೃತಿ ಹೊಂದಿ ವಿಶ್ವವನ್ನು ಮಾದಕವಸ್ತುಗಳಿಂದ ಮುಕ್ತವಾಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ.

ಕಾಲೇಜಿನ ಪ್ರಾಂಶುಪಾಲ ಮೋಹನ್ ಮಾತನಾಡಿ, ಧರ್ಮಸ್ಥಳ ಸಂಸ್ಥೆಯ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಇಂದಿನ ದಿನದಲ್ಲಿ ಅತ್ಯಂತ ಅವಶ್ಯಕ ಹಾಗೂ ಅರ್ಥಪೂರ್ಣವಾಗಿದ್ದು ಹಾದಿ ತಪ್ಪುತ್ತಿರುವ ವಿದ್ಯಾರ್ಥಿಗಳಿಗೆ ಸರಿ ದಾರಿಯನ್ನು ತೋರಿಸುವ ದಿಕ್ಕೂಚಿಯಂತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮೋಹನ್, ಸಂಪನ್ಮೂಲ ವ್ಯಕ್ತಿಗಳಾದ ರವಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸುಜೇಂದ್ರ ಕುಮಾರ್, ವಕೀಲ ನಾಯಜ್ಪಾಷ,ಪತ್ರಕರ್ತ ಆರ್.ಎಸ್.ಎಸ್ ಮಂಜುನಾಥ್,ಆರ್ ಟಿ ಓ ಮಲ್ಲಿಕಾರ್ಜುನ್ ಅಭಿಮಾನಿ ಅಧ್ಯಕ್ಷ ಗಂಜಿಗೆರೆ ಮಹೇಶ್, ಶ್ರೀ ಧರ್ಮಸ್ಥಳ ಸಂಘದ ಮೇಲ್ವಿಚಾರಕಿ ಲಕ್ಷ್ಮಿ,ರಮ್ಯ, ವಿದ್ಯಾರ್ಥಿಗಳು ಇದ್ದರು.
-ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
