ಚನ್ನರಾಯಪಟ್ಟಣ ( ಬಸವನಪುರ): ಗ್ರಾಮೀಣ ಪಟಣದಲ್ಲಿ ನಡೆದ “ಅವ್ವನ ಹಬ್ಬ” ಎಂಬ ವಿನೂತನ ಹಾಗೂ ಭಾವನಾತ್ಮಕ ಕಾರ್ಯಕ್ರಮವು ತಾಯಂದಿರ ಪಾಲಿನ ತ್ಯಾಗ ಮತ್ತು ಸಾಹಸದ ಪ್ರತೀಕವಾಗಿದೆ. ಬಾಗೂರು ಹೋಬಳಿಯ ಬಸವನಪುರ ಗ್ರಾಮದಲ್ಲಿ 83 ವರ್ಷದ ಶ್ರೀಮತಿ ಸುಭದ್ರಮ್ಮರವರನ್ನು ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಯಿತು.
ಅವರ ಆರು ಮಕ್ಕಳಿಂದ ಆಯೋಜಿತವಾಗಿದ್ದ ಈ ಹಬ್ಬದಲ್ಲಿ, ತಾಯಿಯ ಬಾಳ ಪಯಣದ ಪ್ರತಿಯೊಂದು ಹಂತಕ್ಕೂ ಕೃತಜ್ಞತೆಯ ನಮನ ಸಲ್ಲಿಸಲಾಯಿತು. ವಿಧವೆಯಾದ ಬಳಿಕ ಕೂಲಿ ಕೆಲಸ ಮಾಡಿ, ಮಕ್ಕಳನ್ನು ಉನ್ನತ ಶಿಕ್ಷಣದಿಂದ ಸುಸ್ಥಿರ ಭವಿಷ್ಯ ಒದಗಿಸುವ ತನಕ ಮಾಡಿರುವ ತ್ಯಾಗ ಮತ್ತು ಶ್ರಮಕ್ಕೆ ಗ್ರಾಮಸ್ಥರು ಭಾವನಾತ್ಮಕ ಶ್ಲಾಘನೆ ವ್ಯಕ್ತಪಡಿಸಿದರು. ತಾಯಂದಿರ ಪಾವನತನವನ್ನು ಮೆರೆಯುವಂತಹ ಈ ಘಟನೆಯು ಅಪರೂಪದ ಮಾದರಿಯಾಗಿ ಪರಿಣಮಿಸಿದೆ.
ಈ ಕಾರ್ಯಕ್ರಮದಲ್ಲಿ ಸುಭದ್ರಮ್ಮರವರ ಎರಡನೇ ಮಗಳು ಎ.ಎಸ್. ಜಯಂತಿ ಅವರು ತಾಯಿಗೆ ಗೌರವ ಸಲ್ಲಿಸುತ್ತಿದ್ದಂತೆ, ದೇಶಕ್ಕಾಗಿ ಮಕ್ಕಳನ್ನು ಉಡುಗೊರೆ ನೀಡಿದ ತಾಯಂದಿರಿಗೂ ಸನ್ಮಾನ ಸಲ್ಲಿಸಲಾಯಿತು. “ದೇಶಸೇವೆ, ಈಶಸೇವೆ” ಎಂಬ ಘೋಷವಾಕ್ಯದೊಂದಿಗೆ ತಾಯಿಯ ಕೈಯಿಂದ ಯೋಧರ ತಾಯಂದಿರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮವನ್ನು ಹಾಸನದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಆರ್. ವಾಸುದೇವ್ ಮತ್ತು ಅಂಬಿಕಾ ವಾಸುದೇವ್ ಉದ್ಘಾಟಿಸಿದರು. ಕೇಂದ್ರಿಯ ವಿದ್ಯಾಲಯ, ಹಾಸನದ ನಿವೃತ್ತ ಶಿಕ್ಷಕ ವಾಜೀದ್ ಖಾನ್ ಕುಟುಂಬ ಸಮೇತ ಹಾಜರಿದ್ದು, ಈ ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದರು.
“ಅವ್ವನ ಹಬ್ಬ” ಒಂದು ಹೊಸ ಪ್ರಯೋಗ, ಒಂದು ತಾಯಿಯ ಸಂಕಟಗಳನ್ನು ಒಪ್ಪಿಕೊಂಡು, ಅವಳ ಬದುಕಿನ ಸಾರ್ಥಕತೆಗೆ ಸಮುದಾಯದಿಂದ ಕೃತಜ್ಞತಾ ನಮನ ಸಲ್ಲಿಸಿದ ಅಪೂರ್ವ ಕ್ಷಣವಾಗಿದೆ,” ಎಂದು ಸ್ಥಳೀಯರೊಬ್ಬರು ಹರ್ಷ ವ್ಯಕ್ತಪಡಿಸಿದರು.
- ಮಂಜುನಾಥ್ ಐ.ಕೆ
