ಹಾಸನ: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ವರ್ಧಂತ್ಯುತ್ಸವ ಅಂಗವಾಗಿ ಜು.10 ರಿಂದ 21ರವರೆಗೆ 12 ದಿನಗಳ ಕಾಲ ಉಚಿತ ಕೃತಕ ಕೈ ಕಾಲು ಜೋಡಣಾ ಶಿಬಿರ ಏರ್ಪಡಿಲಾಗಿದೆ ಎಂದು ಬಿಜಿಎಸ್ ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿ ಜಿ.ಹೆಚ್.ಸೋಮಶೇಖರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪರಮಪೂಜ್ಯ ಜಗದ್ಗುರು ಭೈರವೈಕ್ಯ ಪದ್ಮಭೂಷಣ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೃಪಾ ಆಶೀರ್ವಾದಗಳೊಂದಿಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ನಲ್ಲಿರುವ ಬಿ.ಜಿ.ನಗರ ಆದಿಚುಂಚನಗಿರಿ ಆಸ್ಪತ್ರೆ ಮತ್ತು ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಷನ್ ಇವರ ಸಹಯೋಗದೊಂದಿಗೆ ಶಿಬಿರ ನಡೆಸಲಾಗುತ್ತಿದೆ ಎಂದು ತಿಳಿಸಿದರು. ವಿವಿಧ ಅಪಘಾತದಲ್ಲಿ ಕೈಕಾಲು ಕಳೆದುಕೊಂಡವರಿಗೆ ಹಾಗೂ ವಿವಿಧ ಕಾಯಿಲೆಗಳಿಂದ ಅಂಗವಿಕಲರಾಗಿರುವವರಿಗೆ ಕೃತಕ ಕೈ ಮತ್ತು ಕಾಲುಗಳನ್ನು ಅಳವಡಿಸಲಾಗುವುದು. ಈ ವೇಳೆ ಅವರ ಅಳತೆ ಪಡೆದು ಅವಶ್ಯಕತೆ ಇರುವ ಸೂಕ್ತ ಉಪಕರಣವನ್ನೂ ಉಚಿತವಾಗಿ ವಿತರಿಸಲಾಗುವುದು ಎಂದರು.
ಶಿಬಿರಕ್ಕೆ ಬರುವ ಶಿಬಿರಾರ್ಥಿಗಳು ಮತ್ತು ಅವರ ಸಹಾಯಕರಿಗೂ ಊಟದ ವ್ಯವಸ್ಥೆ, ಜನರಲ್ವಾರ್ಡ್, ಔಷಧೋಪಚಾರ ಉಚಿತವಾಗಿ ಇರಲಿದೆ ಎಂದು ಹೇಳಿದರು.
ವಿಕಲ ಚೇತನರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಲ್ಲಿ ಅವರಿಗೆ ಉಚಿತ ಚಿಕಿತ್ಸೆ ನೀಡಲು ಆಸ್ಪತ್ರೆ ಮುಂದಾಗಿದೆ. ಈಗಾಗಲೇ 250ಕ್ಕೂ ಹೆಚ್ಚು ಮಂದಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಬಂದು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.
ಉಚಿತ ಕೃತಕ ಕೈ ಕಾಲು ಜೋಡಣಾ ಶಿಬಿರದಲ್ಲಿ ಪಾಲ್ಗೊಳ್ಳಲು ಬಯಸುವವರು ಮೊ.9448581730, 9900758946, 7975102982, 9113562727, 9916315392 ಮತ್ತು 9632834071 ಈ ನಂಬರ್ಗಳಿಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಧಮೇರ್ಂದ್ರ, ಫಾರ್ಮಸಿ ವಿಭಾಗದ ಮುಖ್ಯಸ್ಥ ಬಿ.ಎನ್.ವೆಂಕಟೇಶ್ವರ್, ಹಾಸನ ಆದಿಚುಂಚನಗಿರಿ ಮಠದ ಮಾಧ್ಯಮ ವಕ್ತಾರ ಬಿ.ಆರ್ ಬೊಮ್ಮೇಗೌಡ ಇದ್ದರು.
