ಮಂಡ್ಯದ ರಂಗಭೂಮಿ ಕಲಾವಿದ ಕೆ. ಜಯರಾಮು ಅವರು ಹಾಸನದ ಕಲಾಭವನದಲ್ಲಿ ಪರಿಚಯವಾದರು. ಆಗಸ್ಟ್ 9ರಂದು ಹಾಸನದಲ್ಲಿ ಪ್ರದರ್ಶನಗೊಳ್ಳಲಿರುವ ‘ಮುದುಕನ ಮದುವೆ’ ನಾಟಕದ ಟಿಕೆಟ್ ಮಾರಾಟದ ನಿಮಿತ್ತ ಅವರ ತಂಡ ಆಗಮಿಸಿತ್ತು.
ಕಂಪನಿ ನಾಟಕಗಳಲ್ಲಿ ಅತ್ಯಂತ ಜನಪ್ರಿಯ ಹಾಸ್ಯ ಮನರಂಜನಾ ನಾಟಕಗಳಲ್ಲಿ ಮುದುಕನ ಮದುವೆ ಕೂಡ ಒಂದು. ವಿದ್ಯಾರ್ಥಿ ದಿನಗಳಲ್ಲಿ ಹಾಸನದ ದನಗಳ ಜಾತ್ರೆಯ ಸಂದರ್ಭದಲ್ಲಿ ಕುಮಾರೇಶ್ವರ ನಾಟಕ ಕಂಪನಿ ಪ್ರದರ್ಶಿಸಿದ್ದ ಈ ನಾಟಕವನ್ನು ನಾನು ವೀಕ್ಷಿಸಿದ್ದೆ. ಪಿ.ಬಿ. ಧುತ್ತರಗಿ ಅವರ ಈ ನಾಟಕ ಉತ್ತರ ಕರ್ನಾಟಕದಲ್ಲಿ ಇಂದಿಗೂ ಅಪಾರ ಜನಪ್ರಿಯತೆಯನ್ನು ಉಳಿಸಿಕೊಂಡಿದೆ ಎಂದು ಅವರು ಹೇಳಿದರು.

ಬಾದಾಮಿ ಬನಶಂಕರಿ ಜಾತ್ರೆಯ ಸಂದರ್ಭದಲ್ಲಿ ಇಂದಿಗೂ ನಾಟಕ ಕಂಪನಿಗಳು ಶಿಬಿರ ಹೂಡಿ ಪ್ರದರ್ಶನ ನೀಡುತ್ತಿವೆ ಎಂದು ತಿಳಿಸಿದರು. ನಾನು, “ಆಗಸ್ಟ್ 8ರಂದು ಬಾದಮಿಗೆ ತೆರಳುತ್ತಿದ್ದೇನೆ. ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಅವರ ನೇತೃತ್ವದಲ್ಲಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ಅವರ ಚಾಲುಕ್ಯ ವರಸಿರಿ ಕೃತಿ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮವಿದೆ. ನಿಮ್ಮ ಮುದುಕನ ಮದುವೆ ನಾಟಕದಲ್ಲಿ ಯಾರು ಅಭಿನಯಿಸುತ್ತಿದ್ದಾರೆ?” ಎಂದು ಕೇಳಿದೆ.
ಅದಕ್ಕೆ ಅವರು, “ಮಂಗಳೂರಿನ ಶೋಭಾ ರೈ, ಬೆಂಗಳೂರಿನ ಲಕ್ಷ್ಮೀ ಶ್ರೀಧರ್, ಮೈಸೂರಿನ ಚೈತ್ರ, ಮಂಡ್ಯದ ಮಂದಾಕಿನಿ, ಹಾಸ್ಯರತ್ನ ಬಿ. ಮಲ್ಲಿಕಾರ್ಜುನ್ (ಹೊಸದುರ್ಗ) ಮುದುಕನ ಪಾತ್ರದಲ್ಲಿ ಹಾಗೂ ಚಿತ್ರನಟ ಮೂಗ್ ಸುರೇಶ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸುತ್ತಿದ್ದಾರೆ” ಎಂದು ತಿಳಿಸಿದರು.

ಕೆ. ಜಯರಾಮು ಅವರು ಮಂಡ್ಯ ಜಿಲ್ಲೆಯ ಮಲ್ಲನಾಯಕನಕಟ್ಟೆ ಗ್ರಾಮದವರು. ತಂದೆ ಕರೀಗೌಡ, ತಾಯಿ ನಿಂಗಮ್ಮ. ಕೃಷಿಕ ಕುಟುಂಬದಲ್ಲಿ 1960ರ ಜೂನ್ 1ರಂದು ಜನಿಸಿದರು. ಬಿ.ಕಾಂ. ವ್ಯಾಸಂಗ ಮಾಡಿದ್ದರೂ ಪೂರ್ಣಗೊಳಿಸಲಿಲ್ಲ.
1970ರಲ್ಲಿ ತಮ್ಮ ಹತ್ತನೇ ವಯಸ್ಸಿನಲ್ಲಿ ‘ಶ್ರೀಕೃಷ್ಣಲೀಲೆ’ ನಾಟಕದಲ್ಲಿ ಬಾಲಕೃಷ್ಣನ ಪಾತ್ರದ ಮೂಲಕ ರಂಗಪ್ರವೇಶ ಮಾಡಿದ ಅವರು, ಕಳೆದ 55 ವರ್ಷಗಳಿಂದ ನಿರಂತರವಾಗಿ ರಂಗಸೇವೆ ಮಾಡುತ್ತಿದ್ದಾರೆ.
ಬಾಲ್ಯದಿಂದಲೇ ರಾಮಾಯಣ, ಮಹಾಭಾರತ ಹಾಗೂ ಶನಿಮಹಾತ್ಮೆ ಕಥೆಗಳ ಓದಿನ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದರು. ಪ್ರೌಢಶಾಲೆಯ ವಾರ್ಷಿಕೋತ್ಸವದಲ್ಲಿ ‘ಎಚ್ಚಮ್ಮನಾಯಕ’ ಏಕಪಾತ್ರಾಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

1975ರಿಂದ 1985ರವರೆಗೆ ತಮ್ಮ ಊರಿನ ಗ್ರಾಮದೇವತೆ ಜಾತ್ರೆಯ ಸಂದರ್ಭದಲ್ಲಿ ಅನೇಕ ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದರು. ಕಂಬನಿ, ತ್ಯಾಗಿ, ನುಡಿದಂತೆ ನಡೆ, ಯಾರು ಹೊಣೆ, ಕುರಿದೊಡ್ಡಿ ಕುರುಕ್ಷೇತ್ರ, ಮಹಾತ್ಯಾಗಿ, ತಂಗಿಯ ತಾಳಿ, ಗಂಡನ ಮನೆ, ಅಂಗಿಬಟ್ಟೆ, ತ್ಯಾಗಮಯಿ ಸೇರಿದಂತೆ ಹಲವು ನಾಟಕಗಳನ್ನು ರಂಗಕ್ಕೇರಿಸಿದರು.
1985ರ ಜೂನ್ 7ರಂದು ರಾಧಾ ಅವರೊಂದಿಗೆ ವಿವಾಹವಾದರು. ಯಶಸ್ವಿನಿ ಹಾಗೂ ಶೃತಿ ಎಂಬ ಇಬ್ಬರು ಪುತ್ರಿಯರಿದ್ದಾರೆ.
ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿ ಎಂ.ಟಿ.ಎನ್. ಟೈಲ್ಸ್ ಖಾಸಗಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೂ ರಂಗಭೂಮಿಯ ನಂಟು ಬಿಡಲಿಲ್ಲ.
ಸಾಮಾಜಿಕ, ಐತಿಹಾಸಿಕ, ಜಾನಪದ ಹಾಗೂ ಪೌರಾಣಿಕ ಸೇರಿ ನೂರಾರು ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ದುಡ್ಡಿನ ದರ್ಪ, ಸಮಯಕ್ಕೊಂದು ಸುಳ್ಳು, ಚಿತ್ರನಟಿ, ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ, ಸಂಗ್ಯಾ ಬಾಳ್ಯಾ, ಶ್ರೀಕೃಷ್ಣಲೀಲೆ, ಕುರುಕ್ಷೇತ್ರ, ಸತ್ಯಹರಿಶ್ಚಂದ್ರ, ರಾಧೇಯ, ಜಗಜ್ಯೋತಿ ಬಸವೇಶ್ವರ ಸೇರಿದಂತೆ ಅನೇಕ ನಾಟಕಗಳು ಅವರ ಕಲಾಜೀವನದ ಮೈಲುಗಲ್ಲುಗಳಾಗಿವೆ.

ದೂರದರ್ಶನದಲ್ಲಿ ಪ್ರಸಾರವಾದ ಶ್ರೀಕೃಷ್ಣಗಾರುಡಿ, ಶ್ರೀ ರಾಮಾಂಜನೇಯ ಯುದ್ಧ, ಬಾಲಭಾರತ, ಮಹಾಯಾನ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕ್ಯಾಸೆಟ್ ನಾಟಕಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ.
ವೃತ್ತಿರಂಗಭೂಮಿಯಲ್ಲಿ ಧರ್ಮದೇವತೆ, ಚೆನ್ನಪ್ಪ ಚೆನ್ನೆಗೌಡ, ಮುದುಕನ ಮದುವೆ, ಬಸ್ ಕಂಡಕ್ಟರ್, ಚಿನ್ನದ ಗೊಂಬೆ, ಕೊಂಡು ತಂದ ಗಂಡ, ರೈತನ ಮಕ್ಕಳು, ರತ್ನ ಮಾಂಗಲ್ಯ ಸೇರಿದಂತೆ ಅನೇಕ ಜನಪ್ರಿಯ ನಾಟಕಗಳಲ್ಲಿ ನಟಿಸಿದ್ದಾರೆ.
‘ಮುದುಕನ ಮದುವೆ’ ನಾಟಕವು ಆಗಸ್ಟ್ 9, 2026ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಹಾಸನದ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದ್ದು, ಪ್ರವೇಶ ದರ ₹100 ಆಗಿದೆ.
ಕಿರುತೆರೆ ಕ್ಷೇತ್ರದಲ್ಲಿಯೂ ಅವರು ಅಪಾರ ಸಾಧನೆ ಮಾಡಿದ್ದಾರೆ. ಮಾಯಾವಿ, ಕುಸುಮಾಂಜಲಿ, ವಾತ್ಸಲ್ಯ, ಸುಕನ್ಯ, ಶಿವಲೀಲಾಮೃತ, ಕಾಲಚಕ್ರ, ಮಣ್ಣಿನ ಋಣ, ಕಾಮಧೇನು, ಅನುಬಂಧ, ನೆನಪಿನ ನಾವೆ, ಅರುಂಧತಿ, ಸಿಐಡಿ, ಶಾಂತಂ ಪಾಪಂ, ವಿಷ್ಣುದಶಾವತಾರ, ಯಡಿಯೂರು ಸಿದ್ಧಲಿಂಗೇಶ್ವರ, ಸೂರ್ಯವಂಶ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಚೆಂದುಳ್ಳಿ ಚೆಲುವೆ, ಗುರುಕುಲ, ಒನ್ ಡೇ, ಕೋಟೆ, ಕಾಂಚಾಣ, ಆಟ, ಅಂಬರೀಶ, ಮಂಡ್ಯ ಟು ಮುಂಬೈ, ಬೈಸಿಕಲ್ ಬಾಯ್ಸ್, ವಿಕ್ಟರಿ-2, ದಶರಥ, ರೋಮಿಯೋ, ದರ್ಬಾರ್, ಮತದಾರ ಪ್ರಭುಗಳು, ಗೋಪಿಲೋಲ, ಡೀಲ್ ಸೇರಿದಂತೆ ಅನೇಕ ಕನ್ನಡ ಚಲನಚಿತ್ರಗಳಲ್ಲೂ ತಮ್ಮ ಅಭಿನಯದ ಮೂಲಕ ಗುರುತಿಸಿಕೊಂಡಿದ್ದಾರೆ.
ಅವರು ಮಲ್ನಾಡ್ ಚಂದ್ರು ಮಿತ್ರ ಮಂಡಳಿ, ಕರ್ನಾಟಕ ಕಲಾ ವೈಭವ ಸಂಘ, ಕುಮಾರೇಶ್ವರ ನಾಟಕ ಸಂಘ, ಡಿಂಗ್ರಿ ನಾಗರಾಜ್ ಮಿತ್ರ ಮಂಡಳಿ, ಬಣ್ಣ ಕಲಾವಿದರು, ರಂಗಕಹಳೆ, ರಂಗಶ್ರೀ ಕಲಾಸಂಸ್ಥೆ ಸೇರಿದಂತೆ ಅನೇಕ ಪ್ರತಿಷ್ಠಿತ ರಂಗತಂಡಗಳೊಂದಿಗೆ ಕಾರ್ಯನಿರ್ವಹಿಸಿದ್ದಾರೆ.
ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿತೆರೆ — ಈ ಮೂರು ಕ್ಷೇತ್ರಗಳಲ್ಲೂ ಐದು ದಶಕಗಳಿಗೂ ಹೆಚ್ಚು ಕಾಲ ನಿರಂತರವಾಗಿ ಸೇವೆ ಸಲ್ಲಿಸಿರುವ ಕೆ. ಜಯರಾಮು ಅವರು ಕನ್ನಡ ರಂಗಭೂಮಿಯ ಅಪರೂಪದ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.
– ಗೊರೂರು ಅನಂತರಾಜು, ಹಾಸನ
