ಹಾಸನ, ಆ. 4: ಹೊಳೆನರಸೀಪುರ ತಾಲೂಕಿನ ಕುಂಕುಮದ ಹೊಸೂರು ಗ್ರಾಮದ ಗ್ರಾಮೀಣ ಪ್ರತಿಭೆ ಕೆ.ಆರ್. ಇಂಪನಾ ಅವರು ಕೃಷಿ ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 60ನೇ ಘಟಿಕೋತ್ಸವದಲ್ಲಿ ಎಂ.ಎಸ್ಸಿ (ಅಗ್ರಿಕಲ್ಚರ್ ಮೈಕ್ರೋಬಯಾಲಜಿ) ವಿಭಾಗದಲ್ಲಿ ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಇಂಪನಾ ಅವರು ಹಾಲಿ ಕಿದ್ವಾಯಿ ಆಸ್ಪತ್ರೆಯ ಉದ್ಯೋಗಿಯಾಗಿರುವ ಕೆ.ಎಂ. ರಾಜಶೇಖರ್ ಹಾಗೂ ಎಂ.ಎಂ. ಜಮುನಾ ದಂಪತಿಯ ಪುತ್ರಿಯಾಗಿದ್ದು, ಬೆಂಗಳೂರಿನ ಯಲಹಂಕದ ಜಿ.ಕೆ.ವಿ.ಕೆ. ಕೃಷಿ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಪೂರ್ಣಗೊಳಿಸಿ ಈ ಸಾಧನೆ ಮಾಡಿದ್ದಾರೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 60ನೇ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಂದ ಚಿನ್ನದ ಪದಕ ಹಾಗೂ ಪದವಿ ಪ್ರಮಾಣಪತ್ರವನ್ನು ಸ್ವೀಕರಿಸಿದರು. ಸಮಾರಂಭದಲ್ಲಿ ರಾಜ್ಯದ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸುರೇಶ್ ಹಾಗೂ ಸೆನೆಟ್ ಸದಸ್ಯರು ಉಪಸ್ಥಿತರಿದ್ದರು.
ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಇಂಪನಾ ಅವರ ಈ ಸಾಧನೆ ಯುವ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದು, ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ನಂ. ಲೋಕೇಶ್, ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾಲೇಜಿನ ಆಡಳಿತ ಮಂಡಳಿ, ಸ್ನೇಹಿತರು ಹಾಗೂ ಬಂಧುಗಳು ಅಭಿನಂದಿಸಿದ್ದಾರೆ.
