ಹಾಸನ: ಹಾಸನ ಮಹಾನಗರ ಪಾಲಿಕೆ, ರಾಜ್ಯ ಹಣಕಾಸು ಆಯೋಗ ಮತ್ತು ಮಹಾನಗರ ಪಾಲಿಕೆ ಅನುದಾನದ ಅಡಿಯಲ್ಲಿ ವಿಕಲಚೇತನರಿಗೆ ತ್ರಿ ಚಕ್ರ ವಾಹನವನ್ನು ಶಾಸಕ ಸ್ವರೂಪ್ ಪ್ರಕಾಶ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ವಿವಿಧ ಕಾರಣಗಳಿಂದ ಅಂಗಾಂಗಗಳನ್ನು ಕಳೆದುಕೊಂಡಿರುವ ಮಹಿಳೆಯರು ಹಾಗೂ ಪುರುಷರು ಕೂಡ ಇಂದು ಸಣ್ಣ ಪುಟ್ಟ ಕೆಲಸಗಳು ಹಾಗೂ ಉದ್ಯಮಗಳನ್ನು ನಡೆಸಿಕೊಂಡು ಬದುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಓಡಾಡಲು ತ್ರಿ ಚಕ್ರ ವಾಹನಗಳು ಅನುಕೂಲವಾಗಲಿದ್ದು ಅವರಿಗೂ ಬದುಕು ಕಟ್ಟಿಕೊಳ್ಳಲು ಸಹಾಯಕವಾಗಲಿದೆ ಎಂದರು.
ಫಲಾನುಭವಿಗಳು ಇದರ ಸದುಪಯೋಗ ಪಡಿಸಿಕೊಳ್ಳುವ ಜೊತೆಗೆ ಸಹಕಾರ ಬ್ಯಾಂಕ್ನಲ್ಲಿ ಕೂಡ ವಿಕಲಚೇತನರಿಗೆ ವಿವಿಧ ಉದ್ಯಮಕ್ಕೆ ಸಾಲ ಸೌಲಭ್ಯವೂ ಲಭ್ಯವಿದೆ, ಅವುಗಳನ್ನು ಬಳಸಿಕೊಂಡು ತಾವು ಕೂಡ ಎಲ್ಲರಂತೆ ಆರ್ಥಿಕವಾಗಿ, ಸಾಮಾಜಿಕವಾಗಿ ಮುನ್ನೆಲೆಗೆ ಬರಬೇಕು ಎಂದು ಕರೆ ನೀಡಿದರು.
ಮಹಾನಗರ ಪಾಲಿಕೆಯ ಮೇಯರ್ ಚಂದ್ರೇಗೌಡ ಮಾತನಾಡಿ, 19 ತ್ರಿಚಕ್ರ ವಾಹನಗಳನ್ನು ಇಂದು ನೀಡಲಾಗಿದೆ, ಇದನ್ನು ಮಂಜೂರು ಮಾಡಿಕೊಟ್ಟ ಸರ್ಕಾರ ಹಾಗೂ ಸಹಕಾರ ನೀಡಿದ ಎಲ್ಲಾ ಜನಪ್ರತಿನಿಧಿಗಳಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.
ವಿಕಲಚೇತನರ ಕಲ್ಯಾಣಕ್ಕೆ ರಾಜ್ಯ ಸರ್ಕಾರದ ಜೊತೆ ಹಾಸನ ಮಹಾನಗರ ಪಾಲಿಕೆ ಕೂಡ ತನ್ನ ಅನುದಾನದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಅವುಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಫಲಾನುಭವಿಗಳು ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು
ಹಾಸನ ಮಹಾನಗರ ಪಾಲಿಕೆ ಉಪಮೇಯರ್ ಹೇಮಲತಾ, ಆಯುಕ್ತ ಕೃಷ್ಣಮೂರ್ತಿ, ಸೇರಿದಂತೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.
