ಚನ್ನರಾಯಪಟ್ಟಣ, ಜುಲೈ 10: ಡಾ. ಮಂಜುನಾಥ ನಗರ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮಾ ಮಹೋತ್ಸವ ಶ್ರದ್ಧಾ ಮತ್ತು ಭಕ್ತಿಯಿಂದ ಭಕ್ತಜನ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು.
ದಿನದ ಆರಂಭದಲ್ಲಿ ಬಾಬಾ ಅವರಿಗೆ ಕಾಕಡ ಆರತಿ, ಅಭಿಷೇಕ ಮತ್ತು ವಿಶೇಷ ಅಲಂಕಾರ ನೆರವೇರಿಸಲಾಯಿತು. ಮಧ್ಯಾಹ್ನ 12ಕ್ಕೆ ವಿಶೇಷ ಆರತಿ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಿತು. ಸಂಜೆ ಧೂಪಾರತಿ ನಂತರ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.
ಕಾರ್ಯಕ್ರಮಕ್ಕೆ ಕತ್ತರಿಗಟ್ಟ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಪೂಜ್ಯಶ್ರೀ ಚಂದ್ರಶೇಖರ ಗುರೂಜಿ ಆಗಮಿಸಿ ಬಾಬಾರ ದರ್ಶನ ಪಡೆದು, “ಗುರುವಿನ ಧ್ಯಾನ ಹಾಗೂ ಆರಾಧನೆ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಮನುಷ್ಯನ ಜೀವನದಲ್ಲಿ ಗುರು ಆಶೀರ್ವಾದ ಅತ್ಯಂತ ಅವಶ್ಯಕ,” ಎಂದು ಮಾತನಾಡಿದರು. ಅವರು ಬಾಬಾ ಮಂದಿರದ ಧರ್ಮಸೇವಕಿ ಪ್ರಭಾ ಕಾಚೇನಹಳ್ಳಿ ಅವರ ನಿಷ್ಠೆಯನ್ನು ಪ್ರಶಂಸಿ, ಅವರ ಸೇವೆ ನಿರಂತರ ಮುಂದುವರೆಯಲಿ ಎಂದು ಆಶೀರ್ವಾದಿಸಿದರು.

ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಎಂ.ಎ. ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎನ್. ಪುಟ್ಟಸ್ವಾಮಿಗೌಡ, ಶ್ರೀಮತಿ ಕುಸುಮ ಬಾಲಕೃಷ್ಣ, ಪುರಸಭೆ ಮಾಜಿ ಅಧ್ಯಕ್ಷ ನಾಗರಾಜ್, ಪರಿಸರ ಪ್ರೇಮಿ ಸಿ.ಎನ್. ಅಶೋಕ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಎನ್. ಲೋಕೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್, ಯುವ ಕಾಂಗ್ರೆಸ್ ಮುಖಂಡ ಯುವರಾಜ್, ಪುರಸಭೆ ಸದಸ್ಯ ಸಿ.ಎನ್. ಶಶಿಧರ್, ಗಂಗಾಧರ್, ಶರತ್, ಜೈದೀಪ್ ಸೇರಿದಂತೆ ಹಲವು ಗಣ್ಯರು ಹಾಗೂ ದಾನಿಗಳು ಬಾಬಾರ ದರ್ಶನ ಪಡೆದರು.
ಹೋಮ ಹಾಗೂ ಪೂಜಾ ಕಾರ್ಯಕ್ರಮಗಳನ್ನು ವೇದಬ್ರಹ್ಮ ಶ್ರೀ ಸುಧೀರ್ ಶರ್ಮ ಮತ್ತು ತಂಡ ನೆರವೇರಿಸಿದರು. ಧಾರ್ಮಿಕ ವಾದ್ಯಗೋಷ್ಠಿಯನ್ನು ನೂತನ ವಾಕ್ಯವೃಂದದ ಮಂಜಪ್ಪ ನೇತೃತ್ವದ ತಂಡ ಸಂಭ್ರಮದೊಂದಿಗೆ ನಿರ್ವಹಿಸಿತು.
ಭಜನಾ ಕಾರ್ಯಕ್ರಮಗಳಲ್ಲಿ ಶೇಷಾದ್ರಿ ಭಜನಾ ಮಂಡಳಿ, ಬ್ರಾಹ್ಮಣ ಮಹಿಳಾ ವೇದಿಕೆ, ವಾಸವಿ ಭಜನಾ ತಂಡ, ಸರಸ್ವತಿ ಕಲಾತಂಡ, ಶ್ರೀನಿಧಿ, ರೇಣುಕಾ, ಓಂಕಾರೇಶ್ವರ ಹಾಗೂ ವೆಂಕಟೇಶ್ವರ ಭಜನಾ ಮಂಡಳಿಗಳ ತಂಡಗಳು ಭಾಗವಹಿಸಿ ದಿನಪೂರ್ತಿ ಭಜನೆಗೈದವು.
ಮುಂಜಾನೆ 7ರಿಂದ ರಾತ್ರಿ 11ರವರೆಗೆ ಸಾರ್ವಜನಿಕರಿಗೆ ಬಾಬಾರ ದರ್ಶನ ನೀಡಲಾಗಿದ್ದು, ಈ ಕುರಿತಂತೆ ಮಂದಿರದ ಮುಖ್ಯಸ್ಥೆ ಪ್ರಭಾ ಕಾಚೇನಹಳ್ಳಿ ಅವರು ಮಾಹಿತಿ ನೀಡಿದರು.
– ಮಂಜುನಾಥ್ ಐ ಕೆ.

[…] […]
[…] […]