ಚನ್ನರಾಯಪಟ್ಟಣ (ಶ್ರವಣಬೆಳಗೊಳ), ಜುಲೈ 10: ಸಹಸ್ರಾವಧಿ ಇತಿಹಾಸ ಹೊಂದಿರುವ, ಜೈನ ಧರ್ಮದ ಪವಿತ್ರ ತೀರ್ಥಕ್ಷೇತ್ರ ಶ್ರವಣಬೆಳಗೊಳವನ್ನು ವಿಶ್ವ ಪಾರಂಪರಿಕ (ವಿಶ್ವ ಹೇರಿಟೇಜ್) ಪಟ್ಟಿಗೆ ಸೇರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಈ ಕುರಿತ ಪ್ರಕ್ರಿಯೆ ಮುಂದುವರೆದಿದೆ ಎಂದು ಪ್ರವಾಸೋದ್ಯಮ ಮತ್ತು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಶ್ರವಣಬೆಳಗೊಳದ ಶ್ರೀ ದಿಗಂಬರ ಜೈನ ಮಠದಲ್ಲಿ ಆಯೋಜಿಸಲಾಗಿದ್ದ “ಅಯ್ಯೋ ಸಿದ್ಧ ವರ್ಷ ಯೋಗ ಚಾತುರ್ಮಾಸ ಮಂಗಳ ಕಲಶ ಸ್ಥಾಪನೆ” ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಬಾಹುಬಲಿ ನೆಲಸಿರುವ ಈ ಕ್ಷೇತ್ರವು ತ್ಯಾಗ, ಸಂಯಮ, ಶಾಂತಿ ಮತ್ತು ವೈರಾಗ್ಯದ ಆದರ್ಶವನ್ನು ಪ್ರತಿಪಾದಿಸುತ್ತದೆ. ಜೈನಾಚಾರ್ಯರು ಸಮಾಜದ ಕಲ್ಯಾಣಕ್ಕಾಗಿ ತ್ಯಾಗಮಯ ಜೀವನವನ್ನು ಅಳವಡಿಸಿಕೊಂಡ ಮಹಾತ್ಮರು,” ಎಂದು ಹೇಳಿದರು.
ಪ್ರಾಚೀನ ಕಲಾ ವೈಭವಕ್ಕೆ ಸಂರಕ್ಷಣಾ ಭರವಸೆ:
ಮಠದ ಒಳಾಂಗಣದ ಗೋಡೆಗಳ ಮೇಲೆ ಬಿಡಿಸಿರುವ 1000 ವರ್ಷದ ಹಿಂದಿನ ವರ್ಣಚಿತ್ರಗಳು ಅತ್ಯಂತ ಸುಂದರವಾಗಿದ್ದು, ಅವುಗಳ ಸಂರಕ್ಷಣೆಗೆ ಇಲಾಖೆಗೆ ಸೂಚನೆ ನೀಡಿದ್ದೇನೆ. ಈ ಕಾರ್ಯಕ್ಕಾಗಿ ಯಾವುದೇ ಮೊತ್ತ ಬೇಕಾದರೂ ಸರ್ಕಾರ ಹಣಕಾಸು ನೆರವು ಒದಗಿಸುತ್ತದೆ ಎಂದು ಪಾಟೀಲ್ ಭರವಸೆ ನೀಡಿದರು.
2030ರ ಮಹಾಮಸ್ತಕಾಭಿಷೇಕಕ್ಕೂ ಬೆಂಬಲ:
2030ರ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಯಾವುದೇ ಪಕ್ಷದ ಸರ್ಕಾರವಿದ್ದರೂ ಸಹ ಅದರ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜೈನ ಕವಿಗಳಾದ ಪಂಪ, ರನ್ನ, ಪೊನ್ನ, ಜನ್ನ, ನಯಸೇನರ ಕೊಡುಗೆ ಅಮೂಲ್ಯವಾಗಿದೆ ಎಂದೂ ಅವರು ಸ್ಮರಿಸಿದರು.
ಇದನ್ನು ಓದಿ: ಚನ್ನರಾಯಪಟ್ಟಣದಲ್ಲಿ ಶ್ರದ್ಧಾ-ಭಕ್ತಿಯಿಂದ ಶ್ರೀ ಶಿರಡಿ ಸಾಯಿಬಾಬಾ ಗುರುಪೂರ್ಣಿಮಾ ಮಹೋತ್ಸವ
ವಿಂಧ್ಯಗಿರಿ – ಚಂದ್ರಗಿರಿ ಬೆಟ್ಟಗಳಿಗೆ ರೋಪ್ವೇ:
ವಿಂಧ್ಯಗಿರಿ ಮತ್ತು ಚಂದ್ರಗಿರಿ ಬೆಟ್ಟಗಳ ನಡುವೆ ರೋಪ್ವೇ ನಿರ್ಮಾಣಕ್ಕೂ ಸರ್ಕಾರ ಬದ್ಧವಾಗಿದೆ. ತಾಂತ್ರಿಕ ಅಡೆತಡೆಗಳನ್ನು ಶೀಘ್ರ ಪರಿಹರಿಸಲಾಗುತ್ತದೆ ಎಂದು ಹೇಳಿದರು.
2 ಕೋಟಿ ರೂ. ಚಾವುಂಡರಾಯ ಸಭಾ ಮಂಟಪಕ್ಕೆ:
ಕಾರ್ಯಕ್ರಮದಲ್ಲಿ ಸಚಿವ ಡಿ.ಸುಧಾಕರ್ ಮಾತನಾಡಿ, ಜೈನ ಮಠದ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ಕಲ್ಲಿನ ಚಾವುಂಡರಾಯ ಸಭಾ ಮಂಟಪಕ್ಕೆ 2 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು ಎಂದು ಹೇಳಿದರು. “ಇದು ಅಹಿಂಸಾ ಕ್ಷೇತ್ರವಾಗಿದೆ, ಇಲ್ಲಿ ತ್ಯಾಗಿಗಳ ದರ್ಶನದ ಅನುಭವ ಭಾಗ್ಯ,” ಎಂದರು.
39 ತ್ಯಾಗಿಗಳ ಚಾತುರ್ಮಾಸ್ಯ ವ್ರತ:
ಕ್ಷೇತ್ರದ ಪೀಠಾಧಿಪತಿ ಸ್ವಸ್ತೀಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಮಾತನಾಡಿ, ಈ ವರ್ಷ ಕ್ಷೇತ್ರದಲ್ಲಿ 39 ತ್ಯಾಗಿಗಳು ಚಾತುರ್ಮಾಸ್ಯ ವ್ರತ ಆಚರಿಸುತ್ತಿದ್ದು, ನಾಲ್ಕು ತಿಂಗಳ ಈ ಅವಧಿಯಲ್ಲಿ ದೇವ, ಗುರು, ಶಾಸ್ತ್ರಗಳ ಅಧ್ಯಯನ ನಡೆಯಲಿದೆ ಎಂದರು.
ಶಾಸಕ ಸಿ.ಎನ್. ಬಾಲಕೃಷ್ಣ ಮನವಿ:
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಶ್ರವಣಬೆಳಗೊಳ ಕ್ಷೇತ್ರಕ್ಕೂ ಚಾಮುಂಡಿ ಬೆಟ್ಟದಂತೆಯೇ ಪ್ರಸಾದ್ ಯೋಜನೆ ತರಬೇಕೆಂಬ ಪ್ರಸ್ತಾವನೆಯನ್ನು ತಾವು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತಿರುವುದಾಗಿ ಹೇಳಿದರು.
ಪುರಾತತ್ವ ಇಲಾಖೆಯ ಭರವಸೆ:
ಅಧೀಕ್ಷಕ ಸುಜಿತ್ ನಯನ ಮಾತನಾಡಿ, ಬೆಂಗಳೂರು ವಲಯದಲ್ಲಿ 129 ಸಂರಕ್ಷಿತ ಸ್ಮಾರಕಗಳ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಶ್ರವಣಬೆಳಗೊಳ ಕ್ಷೇತ್ರಕ್ಕೂ ಅಗತ್ಯ ಸಹಕಾರ ಒದಗಿಸಲಾಗುತ್ತದೆ ಎಂದರು.
ಧಾರ್ಮಿಕ ವೈಭವ:
ಸಮಾರಂಭದಲ್ಲಿ ಮಂಗಲ ವಾದ್ಯಗಳೊಂದಿಗೆ ಎಲ್ಲಾ ತ್ಯಾಗಿಗಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ರಜತದ ಮಂಗಳ ಕಲಶದಲ್ಲಿ ಶ್ರೀ ಚಾರುಕೀರ್ತಿ ಭಟ್ಟಾರಕ್ಜಿಗಳು ಮತ್ತು ಗಣ್ಯರು ಶ್ರೀಫಲ, ಧ್ರವ್ಯಗಳನ್ನು ಹಾಕಿ ಮಂಗಳ ಆರಂಭಿಸಿದರು. ಆಚಾರ್ಯ ಸುವಿಧಿ ಸಾಗರ ಮತ್ತು ವಿಧ್ಯಾಸಾಗರ ಮಹಾರಾಜರು ಚಾತುರ್ಮಾಸ್ಯ ಕುರಿತ ಆಶೀರ್ವಚನ ನೀಡಿದರು. ವರ್ಧಮಾನ ಸಾಗರ ಮಹಾರಾಜರು ಹಾಗೂ ಬಾನುಕೀರ್ತಿ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು.
ವೈದ್ಯಕೀಯ, ಸಮಾಜದ ನೇತೃತ್ವ:
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಫ್ತಾಬ್ ಪಾಷಾ, ಸದಸ್ಯ ಎಸ್.ಬಿ. ಯಶಸ್, ಜೈನ ಸಮಾಜದ ಅಧ್ಯಕ್ಷರು, ಮಹಿಳಾ ಸಮಾಜದ ಪದಾಧಿಕಾರಿಗಳು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಎಲ್ಲಾ ತ್ಯಾಗಿಗಳಿಗೆ ಶ್ರೀಫಲ ಸಮರ್ಪಿಸಿ ಗೌರವಿಸಲಾಯಿತು.
