ಹಾಸನ: ಸಮಾಜದಲ್ಲಿದ್ದ ಮೌಢ್ಯ, ತೊಡಕುಗಳನ್ನು ತೊಡೆದು ಹಾಕಲು 12ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿ ಹೋರಾಟ ಮಾಡುವುದರ ಜೊತೆಗೆ ವಚನಗಳನ್ನು ರಚಿಸಿದಂತ ಹಡಪದ ಅಪ್ಪಣ್ಣನವರ ಹಾದಿಯಲ್ಲಿ ನಾವೆಲ್ಲರೂ ಸಾಗಿ ಕೆಲಸಗಳನ್ನು ನಿರ್ವಹಿಸೋಣ ಎಂದು ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್ ಎಲ್.ಎಸ್.ರಮೇಶ್ ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರ ಇಂತಹ ಸಮಾಜ ಸುಧಾರಕರ ಜಯಂತಿಗಳನ್ನು ಆಚರಣೆ ಮಾಡುವುದರ ಉದ್ದೇಶ ಸಮಾಜz ಉದ್ಧಾರಕ್ಕಾಗಿ ಯಾರ್ಯಾರು ಶ್ರಮಿಸಿದ್ದಾರೋ ಅವರನ್ನು ನೆನಪಿಸಿಕೊಂಡು ಗೌರವಿಸಲು ಹಾಗೂ ಅವರು ಹಾಕಿಕೊಟ್ಟದಾರಿಯಲ್ಲಿ ಮುಂದುವರೆಯಲು ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಹಮ್ಮಿಕೊಳ್ಳುತ್ತಿದೆ. ಅವರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರಾಗಿದ್ದಾರೆ ಎಂದರು.
ತಹಶೀಲ್ದಾರ್ ಹುಲಿವಾಲ ಮೋಹನ್ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಬಸವಣ್ಣನವರನ್ನು ನೆನೆಸುವಾಗ ಹಡಪದ ಅಪ್ಪಣ್ಣನವರನ್ನು ನೆನೆಸದೇ ಇರುವುದಕ್ಕೆ ಸಾಧ್ಯವಿಲ್ಲ. ಬಸವಣ್ಣನವರ ಬಳಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿ ಜಾತಿಯತೆಯಂತಹ ಅನೇಕ ತೊಡರುಗಳನ್ನು ಸರಿಪಡಿಸಲು ಶ್ರಮಿಸಿದವರಲ್ಲಿ ಅಪ್ಪಣ್ಣ ಪ್ರಮುಖರಾಗಿದ್ದಾರೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಸಾಹಿತಿ ಪವನ್ ಕುಮಾರ್ ವೈಚಾರಿಕ ಚಿಂತನೆ ಮೂಡಿಸಿದ ಮಹಾನ್ ವ್ಯಕ್ತಿ ಅಡಪದ ಅಪ್ಪಣ್ಣನವರಾಗಿದ್ದಾರೆ. ಇವರ ಖ್ಯಾತಿಯನ್ನು ತಿಳಿದು ಬಸವಣ್ಣನವರೇ ಅನುಭವ ಮಂಟಪದ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಇವರ ಬಲಗೈ ಬಂಟನಾಗಿದ್ದರು. ಯಾವ ವ್ಯಕ್ತಿಯೂ ಕೀಳಲ್ಲ ಯಾವ ವ್ಯಕ್ತಿಯು ಮೇಲಲ್ಲ ಎಂದು ತಿಳಿಸಿದ ಮಹಾನ್ ವ್ಯಕ್ತಿ. ಅಂದಿನ ಕಾಲದಲ್ಲಿಯೇ ಯುವ ಸಮಾಜದ ಧ್ವನಿಯಾಗಿದ್ದವರು. ಇವರು 250ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಜಾತಿಯತೆ ಅಜ್ಞಾನ ಮೂಢನಂಬಿಕೆಗಳನ್ನು ವಿರೋಧಿಸಿ ವೈಚಾರಿಕತೆಯ ಮೂಲಕ ಬೆಳಕು ಚೆಲ್ಲಿದಂತಹ ಮಹಾನ್ ವ್ಯಕ್ತಿ. ಇಂದಿಗೂ ಬನವಾಸಿಯ ಮಧುಕೇಶ್ವರದೇವಾಲಯದ ಶಿಯೋತ್ಸವ ಮಂಟಪದ ಗಗ್ಗರಿಕಲ್ಲಿನ ಮೇಲೆ ಅಪ್ಪಣ್ಣನವರ ಶಿಲ್ಪಗಳನ್ನು ಕಾಣಬಹುದು ಎಂದರು.
ಹಡಪದ ಎಂದರೆ ಕ್ಷೌರಿಕ ವೃತ್ತಿ ಎಂದರ್ಥ. ಅಪ್ಪಣ್ಣನವರು ಕ್ಷೌರಿಕ ವೃತ್ತಿಯನ್ನು ಮಾಡುತ್ತಿದ್ದವರಾಗಿದ್ದಾರೆ. ಒಬ್ಬಕುರೂಪಿಯಾದ ವ್ಯಕ್ತಿಯನ್ನು ಅಂದಚಂದವಾಗಿ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತರುವವರು ನಮ್ಮಕ್ಷೌರಿಕ ಸಮಾಜದವರಾಗಿದ್ದಾರೆ ಹಾಗಾಗಿ ಜಾತಿಧರ್ಮದಾಚೆ ಮನುಷ್ಯ ಧರ್ಮ ದೊಡ್ಡದು ಎಂದು ಇವರು ತೋರಿಸಿದ್ದಾರೆ ಎಂದು ಹಡಪದ ಅಪ್ಪಣ್ಣನವರ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಇದೇ ತಿಂಗಳಲ್ಲಿ ನಿವೃತ್ತಿ ಹೊಂದುತ್ತಿರುವ ತಹಸೀಲ್ದಾರ್ ಹುಲಿವಾಲ ಮೋಹನ್ ಕುಮಾರ್ ಅವರಿಗೆ ಕನ್ನಡ ಸಂಸ್ಕøತಿ ಇಲಾಖೆಯ ವತಿಯಿಂದ ಸನ್ಮಾನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೆಚ್.ಪಿ ತಾರಾನಾಥ್, ಹಾಸನ ಜಿಲ್ಲಾ ನೌಕರರ ಸಂಘದ ಖಜಾಂಚಿ ಹೇಮಂತ್ಕೆ.ಆರ್ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
