ಹಾಸನ: ಇತ್ತೀಚೆಗೆ ಜಿಲ್ಲೆಯಲ್ಲಿ ಹೃದಯಾಘಾತ ಹಾಗೂ ಹಠಾತ್ ಸಾವು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆ, ಜನಪ್ರಿಯ ಆಸ್ಪತ್ರೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಐಎಂಎ ಹಾಸನ ಹಾಗೂ ರೋಟರಿ ಸನ್ರೈಸ್, ರಾಯಲ್ ಇವರ ಸಂಯುಕ್ತಾಶ್ರಯದಲ್ಲಿ ಜು.13 ರಂದು ಉಚಿತ ಹೃದಯ ಸಂಬಂಧಿ ತಪಾಸಣೆ ಮತ್ತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಜನಪ್ರಿಯ ಆಸ್ಪತ್ರೆ ಮುಖ್ಯಸ್ಥ ಡಾ.ಅಬ್ದುಲ್ ಬಷೀರ್, ಅಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ಸಾಲಗಾಮೆ ರಸ್ತೆಯ ರೆಡ್ ಕ್ರಾಸ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚು ಜನರು ಬಂದರೆ ಮುಂದುವರಿಸಲಾಗುವುದು ಎಂದರು.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೃದಯಾಘಾತ ಹೆಚ್ಚಾಗಿರುವುದಕ್ಕೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲ ಸಾವು ಹಾರ್ಟ್ ಅಟ್ಯಾಕ್ನಿಂದಲೇ ಆಗಿವೆ ಎಂಬುದಕ್ಕೆ ನಿಖರ ಪುರಾವೆ ಇಲ್ಲ. ಆದರೆ ನಾವು ಜಾಗೃತರಾಗಿ ಹೃದಯಸಂಬಂಧಿ ಪರೀಕ್ಷೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಇದನ್ನು ಓದಿ:ಜಪಾನ್ ಇಂಟರ್ನೆಟ್ ವೇಗದ ದಾಖಲೆ ಮುರಿದಿದೆ – 1 ಸೆಕೆಂಡಿನಲ್ಲಿ ನೆಟ್ಫ್ಲಿಕ್ಸ್ ಸಂಪೂರ್ಣ ಡೌನ್ಲೋಡ್ ಸಾಧ್ಯ!
ಎದೆಯಲ್ಲಿ ನೋವು, ಅಸ್ವಸ್ಥತೆ, ಉಸಿರಾಟದ ತೊಂದರೆ, ವಾಕರಿಕೆ-ವಾಂತಿ, ತಲೆ ತಿರುಗುವಿಕೆ ಅಥವಾ ಪ್ರಜ್ಞೆ ತಪ್ಪುವುದು, ತಣ್ಣನೆಯ ಬೆವರು, ತೀವ್ರ ಆಯಾಸ ಇವು ಹೃದಯಾಘಾತದ ಸಾಮಾನ್ಯ ಮುನ್ಸೂಚನೆಗಳಾಗಿದ್ದು, ಇದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳೆಂದರೆ ಆರೋಗ್ಯಕರ ಆಹಾರ, ಬಿಪಿ-ಶುಗರ್ ಪರೀಕ್ಷೆ, ನಿಯಮಿತ ವ್ಯಾಯಾಮ ಹಾಗೂ ಆರೋಗ್ಯ ತಪಾಸಣೆ, ಧೂಮ ಮತ್ತು ಮದ್ಯಪಾನದಿಂದ ದೂರ, ಒತ್ತಡ ನಿರ್ವಹಣೆ, ಆರೋಗ್ಯಕರ ತೂಕ ಕಾಪಾಡಿಕೊಂಡು ಔಷಧ ಪಡೆಯಿರಿ ಎಂದರು.
ಜಿಲ್ಲೆಯಲ್ಲಿ ಹೃದಯಾಘಾತ ಆತಂಕ ಹುಟ್ಟಿಸಿವೆ ಎಂದು ಹೇಳಲಾಗುತ್ತಿದೆ ಯಾದರೂ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅಷ್ಟೊಂದು ಹೆಚ್ಚಾಗಿಲ್ಲ. ಹಾಗಾಗಿ ಯಾರೂ ಭಯ ಪಡದೆ, ಮುನ್ನೆಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು.
ಹೆಚ್ಚಿನ ಮಾಹಿತಿ ಹಾಗೂ ಪೂರ್ವ ನೋಂದಣಿಗಾಗಿ 8867059539 ಈ ನಂಬರನ್ನು ಸಂಪರ್ಕಿಸಬಹುದು ಎಂದರು.
ಹೆಮ್ಮಿಗೆ ಮೋಹನ್, ಡಾ.ಶ್ರೀರಂಗ, ಮನೋಜ್ಕುಮಾರ್, ಯೋಗೇಶ್ ಇದ್ದರು.

[…] […]