Oplus_16908288
ಶ್ಲೋಕ – 26
ಇಲ್ಲಿಯ ತನಕ ತ್ರಿಗುಣಗಳ ಬಗ್ಗೆ ಮತ್ತು ತ್ರಿಗುಣಾತೀತರ ಸ್ವಭಾವದ ಬಗ್ಗೆ ವಿವರಿಸಿದ ಕೃಷ್ಣ, ಕೊನೆಯ ಎರಡು ಶ್ಲೋಕದಲ್ಲಿ ನಾವು ತ್ರಿಗುಣಾತೀತರಾಗುವ ಬಗೆ ಹೇಗೆ ಎನ್ನುವುದನ್ನು ವಿವರಿಸುತ್ತಾನೆ. ನಮ್ಮ ಎಲ್ಲ ಪ್ರವೃತ್ತಿಯೂ ಈ ಮೂರು ಗುಣಗಳ ಪರಿಮಿತಿಯಲ್ಲಿ ಇರುವಾಗ ತ್ರಿಗುಣವನ್ನು ಮೀರಿ ನಿಲ್ಲುವುದು ನಮಗೆ ಕಲ್ಪನಾತೀತ. ಹಾಗಾಗಿ ಇಲ್ಲಿ ಕೃಷ್ಣ ನಮಗೆ ತ್ರಿಗುಣಾತೀತರಾಗಲು ಇರುವ ಏಕಮಾತ್ರ ಮಾರ್ಗವನ್ನು ವಿವರಿಸುತ್ತಾನೆ.
ಮಾಂ ಚ ಯೋSವ್ಯಭಿಚಾರೇಣ ಭಕ್ತಿಯೋಗೇನ ಸೇವತೇ ।
ಸ ಗುಣಾನ್ ಸಮತೀತ್ಯೈತಾನ್ ಬ್ರಹ್ಮಭೂಯಾಯ ಕಲ್ಪತೇ ॥೨೬॥
ಮಾಮ್ ಚ ಯಃ ಅವ್ಯಭಿಚಾರೇಣ ಭಕ್ತಿಯೋಗೇನ ಸೇವತೇ ।
ಸಃ ಗುಣಾನ್ ಸಮತೀತ್ಯ ಏತಾನ್ ಬ್ರಹ್ಮಭೂಯಾಯ ಕಲ್ಪತೇ – ನನ್ನನ್ನು ಎಡೆಬಿಡದೆ ಭಕ್ತಿಯಿಂದ ಆರಾಧಿಸುವವನು ಈ ಗುಣಗಳ ಕಟ್ಟನ್ನು ಹರಿದು, ಚೇತನ ಪ್ರಕೃತಿಯಂತೆ ಭಗವಂತನ ಭಕ್ತಿಗೆ ಪಾತ್ರನಾಗುತ್ತಾನೆ.[ಚೇತನ ಪ್ರಕೃತಿಯನ್ನು ಸೇರುತ್ತಾನೆ].
ನಾವು ನಾವಾಗಿ ತ್ರಿಗುಣಾತೀತರಾಗಬೇಕು ಎಂದು ಪ್ರಯತ್ನಿಸಿದರೆ ಆ ಪ್ರಯತ್ನದಲ್ಲಿ ನಾವು ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಎಲ್ಲ ಯೋಚನೆ ತ್ರಿಗುಣದಲ್ಲೇ ಸುತ್ತುತ್ತಿರುತ್ತದೆ. ಇದೊಂದು ಚಕ್ರಭ್ರಮಣ. ಈ ಚಕ್ರ ಭ್ರಮಣದಿಂದ ಪಾರು ಮಾಡಲು ಆ ಚಕ್ರಧಾರಿಯೇ ಬರಬೇಕು. ದ್ವಾದಶಸ್ತೋತ್ರದಲ್ಲಿ ಹೇಳುವಂತೆ: “ತ್ರಿಗುಣಾತೀತ ವಿಧಾರಕ ಪರಿತೋ ದೇಹಿ ಸುಭಕ್ತಿಮ್”. ತ್ರಿಗುಣಾತೀತರನ್ನು ಧಾರಣೆ ಮಾಡುವವ ಆ ಭಗವಂತ. ಆದ್ದರಿಂದ ತ್ರಿಗುಣಾತೀತರಾಗಲು ಇರುವ ಮಾರ್ಗ ಒಂದೆ-ಆ ಭಗವಂತನಲ್ಲಿ ಶರಣಾಗುವುದು. ಲಕ್ಷ್ಮೀಸಮೇತನಾದ ಆ ಭಗವಂತನಲ್ಲಿ ಏಕನಿಷ್ಠೆಯಿಂದ ಅನನ್ಯ ಭಕ್ತಿ ಮಾಡುವುದರಿಂದ – ಲಕ್ಷ್ಮಿಯಿಂದ ಹದಿನೈದು ಬಂಧನದ ಬೇಲಿಯನ್ನು ಧರಿಸಿ ಪ್ರಪಂಚಕ್ಕೆ ಬಂದ ನಾವು, ಈ ಎಲ್ಲಾ ಬಂಧವನ್ನು ಕಳಚಿಕೊಂಡು ಮರಳಿ ತಾಯಿಯ ಮಡಿಲನ್ನು ಸೇರಬಹುದು.
