ಟಿ.ನರಸೀಪುರ : ಹಣ ಇರುವಂತ್ತಹ ವ್ಯಕ್ತಿ ತನ್ನ ದಬ್ಬಾಳಿಕೆ ಮೂಲಕ ಸ್ಥಳೀಯ ರೈತರ ಜಮೀನುಗಳನ್ನ ಕಸಿದುಕೊಂಡು,ಅವರಿಗೆ ತೊಂದರೆಗಳನ್ನು ನೀಡುತ್ತಾ ಬರುತ್ತಿದ್ದರೂ ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದು ಆತಂಕ ಮೂಡಿಸಿದೆ ಎಂದು ಸಂಸದ ಸುನಿಲ್ ಬೋಸ್ ತಿಳಿಸಿದರು.
ತಾಲ್ಲೂಕಿನ ಹೊಳೆಸಾಲು ಗ್ರಾಮ ಪಂಚಾಯತಿಯ ಮೇದನಿ ಹಾಗೂ ಬಣವೇ ಗ್ರಾಮದ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ತಲಕಾಡು ಹೋಬಳಿ ಭಾಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ಅತಿ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ.ಇವರುಗಳಿಗೆ ಸರ್ಕಾರದ ವತಿಯಿಂದ ಅವರ ಜೀವನಕ್ಕೆ ಸಹಾಯವಾಗಲೆಂದು ಆಗಿನ ಕಾಲದಲ್ಲೇ ಜಮೀನುಗಳನ್ನು ನೀಡಲಾಗಿತ್ತು.ಆದರೆ ಈಗ ಯಾವುದೋ ಊರಿನ ವ್ಯಕ್ತಿ ಇಲ್ಲಿಗೆ ಬಂದು ಈ ಮುಗ್ದ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವುದು ಆಶ್ಛರ್ಯ ಮೂಡಿಸಿದೆ ಎಂದರು.
ರಾತ್ರೋರಾತ್ರಿ ರೈತರು ಬೆಳೆದ ಬೆಳೆಗಳನೆಲ್ಲಾ ನಾಶ ಪಡಿಸುತ್ತಾ ಜನರನ್ನು ಭಯ ಭೀತರನ್ನಾಗಿಸಿ ಅತನ ತಂಟೆಗೆ ಹೋದರೆ ಏನಾದರು ಮಾಡಿ ಬಿಡುತ್ತಾನೇನೋ ಅನ್ನುವಷ್ಟರ ಮಟ್ಚಿಗೆ ಎದರಿಸಿದ್ದಾನೆ ಎಂದರೆ ಸ್ಥಳೀಯ ಆರ್.ಐ.,ವಿ.ಎ.ಗಳು ಏನು ಮಾಡುತ್ತಿದ್ದಾರೆಂದು ಪ್ರಶ್ನಿಸಿ ಒಬ್ಬ ಬಡವ ಅಥವಾ ರೈತ ಒಂದು ಕುಂಟೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ ಕೂಡಲೇ ಅಧಿಕಾರಿಗಳು ಬಂದು ಅದನ್ನು ತೆರವು ಮಾಡಿಸುತ್ತೀರಿ.ಈಗ ನೂರಾರು ಎಕರೆ ಜಮೀನು ಖಾಸಗಿ ವ್ಯಕ್ತಿಯ ಪಾಲಾಗಿದ್ದರೂ ಅದನ್ನು ಕೇಳುವ ಗೋಜಿಗೆ ಹೋಗಿಲ್ಲವೆಂದರೆ ನಿಮ್ಮ ಆಡಳಿತ ವೈಖರಿಯನ್ವು ಪ್ರಶ್ನೆ ಮಾಡಬೇಕಿದೆ ಎಂದು ಖಾರವಾಗಿ ತಾಲ್ಲೂಕು ತಹಶಿಲ್ದಾರ್ ವಿರುದ್ಧ ಹರಿಹಾಯ್ದರು.

ಕಂದಾಯ ಇಲಾಖೆಯವರಿಗೆ ಈತನು ವಶ ಪಡಿಸಿಕೊಂಡಿರುವ ಭೂಮಿ ಬಗ್ಗೆ ಮಾಹಿತಿಯೇ ಇಲ್ಲವೇ…?
ನೂರಾರು ಎಕರೆ ಜಮೀನು ಆತನ ಹೆಸರಿಗೆ ಹೋಗಿದೆ ಎಂದರೆ ಕಂದಾಯ ಇಲಾಖೆ ಗಮನಕ್ಕೆ ಬಾರದೇ ಆಗಿದೆಯೇ…? ಕಂಡು ಕಾಣದಂತೆ ವರ್ತಿಸುತ್ತಿರುವ ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿದರು. ಈಗಾಗಲೇ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ ಬಂದಿದ್ದರೂ ಅಧಿಕಾರಿಗಳ ಕಣ್ಣಿಗೆ ಬಿದ್ದಿಲ್ಲವೇ ಎಂದರು.
ಮುಂದುವರಿದು ಮಾತನಾಡಿ ತಹಶಿಲ್ದಾರ್ ಸುರೇಶ್ ಆಚಾರ್ ವಿರುದ್ಧ ಜನರು ನೀಡಿದ ದೂರುಗಳನುಸಾರ ಪ್ರಶ್ನೆ ಮಾಡಿ ಜನರು ರಾಜಕಾರಣಿಗಳಿಗೆ ಅಧಿಕಾರ ನೀಡಿರುವುದು ಅವರ ಸೇವೆ ಮಾಡುವುದಕ್ಕೆ.ಹಾಗಾಗಿ ಜನರು ಅವರ ಕುಂದು ಕೊರತೆಗಳ ಬಗ್ಗೆ ನಮ್ಮ ಗಮನಕ್ಕ ತಂದಾಗ ನಾವು ಅಧಿಕಾರಿಗಳನ್ನೇ ಪ್ರಶ್ನೆ ಮಾಡಬೇಕಾಗುತ್ತದೆ ಅಧಿಕಾರ ಕೊಟ್ಟಿರುವವರು ಜನರು ಅವರಿಗಾಗಿ ಕೆಲಸ ಮಾಡುವುದು ನಮ್ಮ ಜವಾಬ್ದಾರಿ.ಜನತೆ ಸೇವೆ ಪ್ರಾಮಾಣಿಕವಾಗಿ ಮಾಡಲು ಇಷ್ಟವಿದ್ದರೆ ಮಾಡಿ ಇಲ್ಲದಿದ್ದರೆ ಹೊರಡಬಹುದು.ರಾಜಕಾರಣಿಗಳ ಬೆಂಬಲ ಇಲ್ಲದೇ ಇಲ್ಲಿಗೆ ಬಂದಿದ್ದೀರಾ…ರಾಜಕಾರಣಿಗಳು ಹೇಳ್ಬಿಡ್ತಾರೆ ಅದರಂತೆ ನಾವು ಕೆಲಸ ಮಾಡಿದರೆ ಮನೆಗೆ ಹೋಗಬೇಕಾಗುತ್ತದೆ ಎಂದು ಹೇಳಿದ್ದೀರ ಬೇಡಾ..ಜನರಿಗಾಗಿ ಕೆಲಸ ಮಾಡದಿದ್ದರೆ ಮನೆಗೆ ಹೋಗಿ ಎಂದು ಗುಡುಗಿದರು.
ಇದೇ ಸಂದರ್ಭದಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿ ವಶಪಡಿಸಿಕೊಂಡಿರುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಂಡು,ಸರ್ವೇ ಮಾಡಿಸಿ ಮನೆ ಇಲ್ಲದವರಿಗೆ ಮನೆ ಕೊಡೋಣ, ಬಡವರಿಗೆ ಭೂಮಿ ನೀಡೋಣ,ಎಲ್ಲೆಲ್ಲಿಂದಲೋ ಬಂದು ಸ್ಥಳೀಯವಾಗಿ ಇರುವ ಜನರಿಗೆ ಅನ್ಯಾಯವಾಗುವುದನ್ನು ತಪ್ಪಿಸೋಣ ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿಯವರು ಕೂಡಲೇ ಪ್ರೊಟೆಕ್ಷನ್ ತೆಗೆದುಕೊಂಡು ತೆರವು ಮಾಡಿಸಬೇಕೆಂದು ಸೂಚಿಸಿದರು.

ಜಿಲ್ಲಾಧಿಕಾರಿಗಳಾದ ಲಕ್ಷೀಕಾಂತರೆಡ್ಡಿ ಮಾತನಾಡಿ ಕೂಡಲೇ ಸರ್ವೇ ಮಾಡಿಸಲು ಎಸಿಯವರಿಗೆ ತಿಳಿಸುತ್ತೇನೆ.ಯಾರ್ಯಾರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ್ದಾರೆ ತಕ್ಷಣ ಪೊಲೀಸ್ ಪ್ರೊಟೆಕ್ಷನ್ ತೆಗೆದುಕೊಂಡು ಒತ್ತುವರಿ ತೆರವುಗೊಳಿಸಲು ಸೂಚಿಸಿದ್ದೇನೆ.ಹತ್ತು ದಿನಗಳಲ್ಲಿ ಸರ್ವೇ ಕಾರ್ಯ ಮುಗಿಯುತ್ತದೆ ಯಾರೂ ಆತಂಕ ಪಡುವ ಅಗತ್ಯವಿಲ್ಲಾ ಎಂದರು.
ಇದನ್ನು ನೋಡಿ: ಟಿ. ನರಸೀಪುರ : ಹೊಳೆಸಾಲು ಗ್ರಾಮದಲ್ಲಿ 192 ಎಕರೆ ಸರ್ಕಾರಿ ಭೂಮಿ ವಶಪಡಿಕೆ ಆರೋಪ!
ಈ ಸಂದರ್ಭದಲ್ಲಿ ಗ್ರಾಮದ ಬಹುತೇಕ ಕಂದಾಯ ಇಲಾಖೆ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೈಮುಲ್ ಅಧ್ಯಕ್ಷರಾದ ಆರ್.ಚೆಲುವರಾಜ್, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ದರ್ಖಾಸು ಕಮಿಟಿ ಸದಸ್ಯರಾದ ಮೇದನಿ ಎಂ.ಎನ್.ಕುಮಾರ್,ತಾಲ್ಲೂಕು ಪಂಚಾಯತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕುಕ್ಕೂರು ಗಣೇಶ್,ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ತಲಕಾಡು ನರಸಿಂಹ ಮಾದನಾಯಕ,ಮುಖಂಡರುಗಳಾದ ಕುಕ್ಕೂರು ಪ್ರಸನ್ನ,ಮೂಗೂರು ಸಾಗರ್,ಮಹೇಂದ್ರ,ಸುಂದರನಾಯಕ ಸೇರಿದಂತೆ ಎರೆಡೂ ಗ್ರಾಮದ ಹಲವಾರು ಮುಖಂಡರು ಸೇರಿದಂತೆ ಗ್ರಾಮಸ್ಥರು, ತಾಲ್ಲೂಕು ಅಧಿಕಾರಿಗಳು ಹಾಜರಿದ್ದರು.
- ಎಂ.ನಾಗೇಂದ್ರ ಕುಮಾರ್
