ಹಾಸನ: ನಗರದಲ್ಲಿ ಹಿಮ್ಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡದಲ್ಲಿ ಹೃದ್ರೋಗ ಹಾಗೂ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಗಳನ್ನು ಆರಂಭಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿ ಸಂಘಟಿತರಾದ ನೂರಾರು ರೈತರು ಹಾಗೂ ಮುಖಂಡರು ಹಸಿರು ಮೆರವಣಿಗೆಯಲ್ಲಿ ಬಾವುಟ ಹಿಡಿದು ಘೋಷಣೆಗಳನ್ನು ಕೂಗುತ್ತಾ ಎನ್ಆರ್ ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ಕುಳಿತು ಸರ್ಕಾರ ಶೀಘ್ರ ಹೃದ್ರೋಗ ಹಾಗೂ ಕ್ಯಾನ್ಸರ್ ಆಸ್ಪತ್ರೆ ತೆರೆಯುವಂತೆ ಹಕ್ಕೊತ್ತಾಯ ಮಾಡಿದರು.
ಈ ವೇಳೆ ರೈತ ಮುಖಂಡ ಆನೆಕೆರೆ ರವಿ ಮಾತನಾಡಿ ಹಿಮ್ಸ್ ಸಂಸ್ಥೆಯು ನೂತನ ಕಟ್ಟಡಗಳನ್ನು ನಿರ್ಮಾಣ ಮಾಡಿ ಎರಡು ವರ್ಷ ಕಳೆದಿದೆ. ಆದರೆ ಇದುವರೆಗೂ ಈ ನೂತನ ಆಸ್ಪತ್ರೆ ಕಟ್ಟಡಕ್ಕೆ ಬೇಕಾದ ಯಂತ್ರೋಪಕರಣ, ವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಮೂಲ ಸೌಕರ್ಯ ಒದಗಿಸಿಲ್ಲ. ಜಿಲ್ಲೆಯಲ್ಲಿ ಪ್ರತಿದಿನ ಹೃದಯಾಘಾತಕ್ಕೆ ಜನರು ಬಲಿಯಾಗುತ್ತಿದ್ದಾರೆ. ಹೃದ್ರೋಗ ಹಾಗೂ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಿದರೆ ನೆರೆಯ ಮಡಿಕೇರಿ, ಚಿಕ್ಕಮಗಳೂರು ಮತ್ತು ಇತರೆ ಜಿಲ್ಲೆಗಳಿಗೂ ಉಪಯೋಗವಾಗಲಿದೆ. ಆದ್ದರಿಂದ ಸರ್ಕಾರ ಕೂಡಲೇ ಆಸ್ಪತ್ರೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೃದಯಾಘಾತಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ತೀವ್ರ ತೊಂದರೆಯಾಗಿದ್ದು ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಹೆಚ್ಚು ಹಣದಲ್ಲಿ ಚಿಕಿತ್ಸೆ ಪಡೆಯುವಂತಾಗಿದ್ದು ಆದ್ದರಿಂದ ಬಡವರಿಗೆ ಅನುಕೂಲ ಕಲ್ಪಿಸಲು ಆಸ್ಪತ್ರೆಯನ್ನು ಪ್ರಾರಂಭಿಸುವಂತೆ ಮನವಿ ಮಾಡಿದರು.
ಹೊಸ ಪಡಿತರ ಚೀಟಿ ವಿತರಿಸಿ: ಪಡಿತರ ಚೀಟಿ ಇಲ್ಲದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಆದಷ್ಟು ಬೇಗ ಹೊಸ ಪಡಿತರ ಚೀಟಿಯನ್ನು ವಿತರಿಸುವ ಕಾರ್ಯವನ್ನು ಕೈಗೊಳ್ಳಬೇಕು. ಸರ್ವರ್ ಸಮಸ್ಯೆಯಿಂದ 7-8 ವರ್ಷಗಳಿಂದ ಹೊಸ ಪಡಿತರ ಚೀಟಿ ವಿತರಣೆಯಾಗಿಲ್ಲ. ಈ ಸಮಸ್ಯೆಯಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮಾಡಿಸಲು ಜನಸಾಮಾನ್ಯರಿಗೆ ತೊಂದರೆಯಾಗಿದೆ. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಹಾಯಧನ ನೀಡಲು ಕಷ್ಟವಾಗುತ್ತಿದೆ. ಆದಷ್ಟು ಬೇಗ ಹೊಸ ಪಡಿತರ ಚೀಟಿಯನ್ನು ವಿತರಣೆ ಮಾಡುವ ಕಾರ್ಯವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಬಾಬು, ಮಹಮದ್ ಸಾಧಿಕ್, ನಾಗೇಶ್, ದಾಸೇಗೌಡ, ರಮೇಶ್, ಜಯಮ್ಮ, ಕೋಮಲಾ, ಪವಿತ್ರ, ಮಹೇಶ್, ಪರಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಜೋಳಕ್ಕೆ ಪರಿಹಾರ ನೀಡಲು ಒತ್ತಾಯ: ಜಿಲ್ಲೆಯಲ್ಲಿ ಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗ ತಗುಲಿರುವುದರಿಂದ ಸಾವಿರಾರು ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಪ್ರತಿ ಎಕರೆಗೆ 40 ರಿಂದ 50 ಸಾವಿರ ಖರ್ಚು ಮಾಡಿ ನಷ್ಟ ಅನುಭವಿಸುವಂತಿದ್ದು, ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಇಲ್ಲವಾದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಜಯರಾಮ್ ಎಚ್ಚರಿಸಿದರು.
ರೈತ ಮುಖಂಡ ಚೆಲುವೇಗೌಡ ಮಾತನಾಡಿ ಮೆಕ್ಕೆಜೋಳಕ್ಕೆ ಸರ್ಕಾರ ಪರಿಹಾರ ವಿತರಿಸಬೇಕು ಹಾಗೂ ಪರ್ಯಾಯಾ ಬೆಳೆ ಬೆಳೆಯಲು ಸೂಕ್ತ ಬಿತ್ತನೆ ಬೀಜಯನ್ನು ಕೃಷಿ ಇಲಾಖೆ ಮೂಲಕ ವಿತರಿಸಬೇಕು. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲಿದೆ ಎಂದು ಮನವಿ ಮಾಡಿದರು.
ಈಗಾಗಲೇ ಕೃಷಿ ಇಲಾಖೆಯಿಂದ ವಿತರಿಸಲಾಗಿರುವ ಮೆಕ್ಕೆಜೋಳ ಬಿತ್ತನೆ ಬೀಜ ಶೇ.80ರಷ್ಟು ಬೆಳೆ ಬಿಳಿ ಸುಳಿ ರೋಗಕ್ಕೆ ತುತ್ತಾಗಿದೆ. ಆಲೂಗೆಡ್ಡೆ ಬೆಳೆ ಅಂಗಮಾರಿ ರೋಗಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಪರ್ಯಾಯವಾಗಿ ಮೆಕ್ಕೆಜೋಳ ಬೆಳೆಯಲು ಮುಂದಾಗಿದ್ದರು ಇದೀಗ ಆ ಬೆಳೆಗೂ ರೋಗ ಆವರಿಸಿದ್ದು ರೈತರು ಪರ್ಯಾಯ ಬೆಳೆ ಬೆಳೆಯಲು ಕೃಷಿ ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ಹಾಗೂ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
