ಬೆಂಗಳೂರು: ದೇವನಹಳ್ಳಿಯಲ್ಲಿ ಉದ್ದೇಶಿತ ಏರೋಸ್ಪೇಸ್ ಉದ್ದಿಮೆ ಸ್ಥಾಪನೆಗಾಗಿ ಕೈಗೊಂಡಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿರುವ ಕ್ರಮಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕ್ರಮವು ಉದ್ದಿಮೆಗಳನ್ನು ಆಕರ್ಷಿಸುವ ಹಾಗೂ ಉದ್ಯೋಗ ಸೃಷ್ಟಿಸುವ ರಾಜ್ಯದ ಸಾಮರ್ಥ್ಯಕ್ಕೆ ಹಿನ್ನಡೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದು, ಈ ನಿರ್ಧಾರದಿಂದ ಆಂಧ್ರಪ್ರದೇಶ ಸರ್ಕಾರ ಲಾಭ ಮಾಡಿಕೊಳ್ಳಲು ಮುಂದಾಗಿದ್ದು, ಅವರನ್ನು ನೋಡಿ ಕಲಿಯಬೇಕು ಎಂದು ಶ್ಲಾಘಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಉದ್ದಿಮೆಗಳನ್ನು ಆಕರ್ಷಿಸುವ ಹಾಗೂ ಉದ್ಯೋಗಗಳನ್ನು ಸೃಷ್ಟಿಸುವ ರೀತಿ ಇದಾಗಿದೆ. ಆಂಧ್ರಪ್ರದೇಶದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ರಿಂದ ಕರ್ನಾಟಕ ಸರ್ಕಾರ ಪಾಠ ಕಲಿತು ತನ್ನ ಕ್ರಮವನ್ನು ಸರಿಪಡಿಸಿಕೊಳ್ಳುತ್ತದೆ ಎಂಬ ವಿಶ್ವಾಸವನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಎಚ್ಎಎಲ್, ಎನ್ಎಎಲ್, ಡಿಆರ್ಡಿಒ, ಇಸ್ರೋ, ಏರ್ಬಸ್, ಬೋಯಿಂಗ್ ಸೇರಿದಂತೆ ಸರ್ಕಾರಿ, ಖಾಸಗಿ ಸಂಸ್ಥೆಗಳು, ನವೋದ್ಯಮಗಳನ್ನು ಹೊಂದಿರುವ ಬೆಂಗಳೂರು ಭಾರತದ ಏರೋಸ್ಪೇಸ್ ರಾಜಧಾನಿ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಏರೋಸ್ಪೇಸ್ ಪಾರ್ಕ್ ಸ್ಥಾಪಿಸಲು ರಾಜಕೀಯ ಇಚ್ಛಾಶಕ್ತಿ ತೋರಬೇಕು ಎಂದೂ ಸಂಸದ ತೇಜಸ್ವಿ ಸೂರ್ಯ ಸಲಹೆ ನೀಡಿದ್ದಾರೆ.
ಏನಿದು ವಿವಾದ?
ಏರೋಸ್ಪೇಸ್ ಉದ್ಯಮಕ್ಕಾಗಿ 1777 ಎಕರೆ ಜಮೀನು ದೇವನಹಳ್ಳಿ ತಾಲೂಕಿನಲ್ಲಿ ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಅದು ಫಲವತ್ತಾದ ಭೂಮಿ ಯಾಗಿದ್ದು ವ್ಯವಸಾಯಕ್ಕೆ ಯೋಗ್ಯವಾಗಿದೆ. ಅಲ್ಲಿನ ರೈತರು ಆ ಜಮೀನಿನ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದ್ದರಿಂದ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂದು ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಭಾರಿ ಹೋರಾಟ ನಡೆದಿತ್ತು. ಸರ್ಕಾರವು ಹಲವು ಹಂತದಲ್ಲಿ ಸಭೆ ನಡೆಸಿ ಹೋರಾಟಗಾರರನ್ನು ಓಲೈಸುವ ಪ್ರಯತ್ನ ನಡೆಸಿತ್ತು.
