ಬೆಂಗಳೂರು, ಜುಲೈ 18: ಆಗಸ್ಟ್ 5ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸಜ್ಜಾಗಿದ್ದ ಸಾರಿಗೆ ನಿಗಮಗಳ ನೌಕರರಿಗೆ ಕರ್ನಾಟಕ ಸರ್ಕಾರ ಈಗ ದೊಡ್ಡ ಶಾಕ್ ನೀಡಿದೆ. ವೇತನ ಪರಿಷ್ಕರಣೆ, ಬಾಕಿ ಇರುವ ಹಣದ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮುಷ್ಕರಕ್ಕೆ ಮುಂದಾಗಿದ್ದ ನೌಕರರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಎಸ್ಮಾ ಜಾರಿ ಮಾಡಿದೆ.
ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ–2013 ಅಡಿ ಎಸ್ಮಾ ಜಾರಿಗೊಳಿಸಿ, ಸಾರಿಗೆ ನೌಕರರಿಗೆ ಮುಂದಿನ 6 ತಿಂಗಳವರೆಗೆ ಯಾವುದೇ ಮುಷ್ಕರ ಅಥವಾ ಪ್ರತಿಭಟನೆ ನಡೆಸದಂತೆ ನಿಷೇಧಿಸಲಾಗಿದೆ. ಈ ಆದೇಶವು ಡಿಸೆಂಬರ್ 31, 2025 ರವರೆಗೆ ಅನ್ವಯವಾಗಲಿದೆ.
ಇದನ್ನು ಓದಿ: ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳ ಆರಂಭಕ್ಕೆ ಚಿಂತನೆ
ಮುಷ್ಕರದ ಎಚ್ಚರಿಕೆಗೆ ಪ್ರತ್ಯುತ್ತರವಾಗಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಾರ್ವಜನಿಕರ ದೈನಂದಿನ ಜೀವನ ಮತ್ತು ಸಾರಿಗೆ ಸೇವೆಗಳ ಸುಗಮತೆಯನ್ನಿಟ್ಟುಕೊಂಡು ಎಸ್ಮಾ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಂಟಿ ಕ್ರಿಯಾ ಸಮಿತಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಈ ಎಸ್ಮಾ ಆದೇಶಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
