ಕೆ.ಆರ್.ಪೇಟೆ: ಮಂಡ್ಯ ಜಿಲ್ಲೆಯನ್ನು 50ವರ್ಷಗಳ ತಮ್ಮ ಪರಿಶ್ರಮದಿಂದ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ಕೀರ್ತಿ ಪ್ರೊ.ಜಯಪ್ರಕಾಶಗೌಡ ಅವರಿಗೆ ಮಂಡ್ಯ ವಿವಿಯು ಗೌರವ ಡಾಕ್ಟರೇಟ್ ಪದವಿ ನೀಡಿರುವುದು ಪ್ರಶಸ್ತಿಯ ಗೌರವ ಹೆಚ್ಚಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ಗ್ರಾಮ ಭಾರತಿ ಶಿಕ್ಷಣ ಸಂಸ್ಥೆಯ ಚಿಕ್ಕಣ್ಣಗೌಡ ಸಭಾಂಗಣದಲ್ಲಿ ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ ಪ್ರೊ.ಜಯಪ್ರಕಾಶಗೌಡ ಅವರಿಗೆ ಮಂಡ್ಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅಭಿನಂದನಾ ನುಡಿಗಳನ್ನಾಡುತ್ತಾ ಪ್ರೊ.ಜಯಪ್ರಕಾಶಗೌಡರು ಮಂಡ್ಯದ ಕರ್ನಾಟಕ ಸಂಘದ ಮೂಲಕ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು.
ಕಳೆದ 50 ವರ್ಷಗಳಿಂದ ಮಂಡ್ಯ ಜಿಲ್ಲೆಯಲ್ಲಿ ಸಂಸ್ಕೃತಿ ಸಂಘಟಕರಾಗಿ, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಎಲೆ ಮರೆಯ ಕಾಯಿಗಳಂತಿರುವ ಸಮಾಜ ಸೇವಕರು ಸಂಘಟಕರು ಹಾಗೂ ಸಾಹಿತಿಗಳನ್ನು ಗುರುತಿಸಲು ಸುಮಾರು 65 ದತ್ತಿನಿಧಿ ಪ್ರಶಸ್ತಿಗಳನ್ನು ಸ್ಥಾಪಿಸುವ ನಾಡಿನಾಧ್ಯಂತ ಇರುವ ಪ್ರತಿಭಾವಂತರನ್ನು ಸನ್ಮಾನಿಸುವ ಮೂಲಕ ಮಂಡ್ಯ ಜಿಲ್ಲೆಯ ಕೀರ್ತಿಯನ್ನು ರಾಜ್ಯಾಧ್ಯಂತ ಪಸರಿಸಿದ್ದಾರೆ.
ಕರ್ನಾಟಕ ಸಂಘದ ಅಧ್ಯಕ್ಷರಾಗಿ ಬದ್ಧತೆಯಿಂದ ಕೆಲಸ ಮಾಡಿ ನೇಪಥ್ಯಕ್ಕೆ ಸರಿದಿದ್ದ ಮೂಡಲಪಾಯ ಯಕ್ಷಗಾನ ಕಲೆಯನ್ನು ಮತ್ತೆ ಸಮಾಜದಲ್ಲಿ ಮುನ್ನಡೆಗೆ ತರುವಲ್ಲಿ ಪ್ರಾಮಾಣಿಕವಾಗಿ ದುಡಿದಿರುವ ಜಯಪ್ರಕಾಶ್ ಗೌಡ ಅವರ ಸಾಹಿತ್ಯ, ಜಾನಪದ ಹಾಗೂ ಸಂಘಟನೆಯ ವಿವಿಧ ಕಾರ್ಯಕ್ಷೇತ್ರದ ಮಜಲುಗಳನ್ನು ಅವಲೋಕನ ಮಾಡಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿರುವ ಹಿನ್ನೆಲೆಯಲ್ಲಿ ಜಯಪ್ರಕಾಶ್ ಗೌಡರ ಅಭಿಮಾನಿಗಳು, ಸಾಹಿತ್ಯ ಪ್ರೇಮಿಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಪ್ರೊಫೆಸರ್ ಜಯಪ್ರಕಾಶ್ ಗೌಡ ಅವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯವಾದುದು.
2008ರಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ದಾನಿಗಳಿಂದ ಆರ್ಥಿಕ ಕೊಡುಗೆಗಳನ್ನು ಪಡೆದು ಕೆ.ವಿ.ಶಂಕರೇಗೌಡರ ಹೆಸರಿನಲ್ಲಿ ಸಾಂಸ್ಕೃತಿಕ ಭವನ ಸೇರಿದಂತೆ ಸುಮಾರು 3ಕೋಟಿ ರೂ ವೆಚ್ಚದಲ್ಲಿ 5 ಅಂತಸ್ತಿನ ಕಟ್ಟಡವನ್ನು ಕಟ್ಟುವ ನಿರ್ಮಿಸಿದ್ದಾರೆ. ಇದೀಗ ಕನ್ನಡ ಸಂಘದ ಬೃಹತ್ ಕಲಾಮಂದಿರವನ್ನು ನಿರ್ಮಿಸುತ್ತಿದ್ದಾರೆ. ಇಂತಹ ಸಾಂಸ್ಕೃತಿಕ ಶ್ರೀಮಂತಿಕೆಗೆ ಎಲ್ಲರ ಸಹಕಾರದೊಂದಿಗೆ ಇಳಿ ವಯಸ್ಸಿನಲ್ಲಿಯೂ ಶ್ರಮಿಸುತ್ತಿದ್ದಾರೆ. ಪ್ರೊ.ಜಯಪ್ರಕಾಶಗೌಡರಂತಹ ಸಾಂಸ್ಕೃತಿಕ ರಾಯಬಾರಿಗಳು ಹೆಚ್ಚಾಗಬೇಕು ಎಂದು ಕೆ.ಟಿ.ಶ್ರೀಕಂಠೇಗೌಡ ಹೇಳಿದರು.
ಶಾಸಕ ಹೆಚ್.ಟಿ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಆರ್.ಟಿ.ಓ.ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಆರ್.ಟಿ.ಓ.ಮಲ್ಲಿಕಾರ್ಜುನ್ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟನೆ ಮಾಡಿದರು.ಪ್ರೊ.ಜಯಪ್ರಕಾಶಗೌಡ ಅವರ ಸಾಧನೆಗಳು ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಹೇಳಿದರು.
ಪ್ರೊ.ಜಯಪ್ರಕಾಶಗೌಡ ಅವರಿಗೆ ಗೌರವ ಡಾಕ್ಟರೇಟ್ ಬಂದಿರುವುದು ಮಂಡ್ಯ ಜಿಲ್ಲೆಯ ಜನತೆಗೆ ಸಂದ ಗೌರವವಾಗಿದೆ . ಜಯಪ್ರಕಾಶಗೌಡ ಅವರು ಸೂಚಿಸುವ ಎಲ್ಲಾ ಕೆಲಸಗಳನ್ನು ಕಾಯಾವಾಚಾ ಮನಸಾ ಪ್ರಾಮಾಣಿಕವಾಗಿ ಮಾಡುವುದಾಗಿ ಹೇಳಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಆರ್.ಪೂರ್ಣ ಚಂದ್ರತೇಜಸ್ವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್ ಅಭಿನಂದನಾ ಪತ್ರವನ್ನು ಓದಿದರು.
ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಸಂಸ್ಥೆ ಅಧ್ಯಕ್ಷ ಬಿ.ಎಲ್.ದೇವರಾಜು, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಬೆಂಗಳೂರು ಎಸಿಪಿ ಲಕ್ಷ್ಮೇಗೌಡ, ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟ ವಾಸು, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಕೆ.ಎಸ್.ಸೋಮಶೇಖರ್, ಕಸಾಪ ಕಾರ್ಯದರ್ಶಿ ಕಟ್ಟೆ ಮಹೇಶ್, ಮುಖಂಡರಾದ ಬಿ.ನಂಜಪ್ಪ, ಅಂಚಿ ಸಣ್ಣಸ್ವಾಮೀಗೌಡ, ಶಿ.ಕುಮಾರಸ್ವಾಮಿ, ಎ.ಆರ್.ರಘು, ಎಸ್.ಎಲ್.ಮೋಹನ್, ಗೂಡೇಹೊಸಹಳ್ಳಿ ಜವರಾಯಿಗೌಡ, ರೈತ ಮುಖಂಡರಾದ ಮುದುಗೆರೆ ರಾಜೇಗೌಡ, ಕೆ.ಆರ್.ಜಯರಾಂ, ನಂದಿನಿಜಯರಾಂ, ಹಾದನೂರು ಪರಮೇಶ್, ಕೆ.ಆರ್.ನೀಲಕಂಠ, ಬಳ್ಳೇಕೆರೆ ಮಂಜುನಾಥ್, ರಾಜೇನಹಳ್ಳಿ ಮೂರ್ತಿ,ಆರ್.ಬಿ.ಪಸ್ಮನಾಭ್ ಸೇರಿದಂತೆ ನೂರಾರು ಗಣ್ಯರು ಅಭಿನಂದನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
– ಮನು ಮಾಕವಳ್ಳಿ ಕೆ ಆರ್ ಪೇಟೆ
