ನವದೆಹಲಿ, ಆಗಸ್ಟ್ 1: ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 21ರ ಒಳಗಾಗಿ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್ 9ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ. ಜಗದೀಪ್ ಧನ್ಕರ್ ರಾಜೀನಾಮೆಯಿಂದ ತೆರವಾದ ಈ ಸ್ಥಾನಕ್ಕೆ ಹೊಸ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಪ್ರಕ್ರಿಯೆ ಆರಂಭಿಸಲಾಗಿದೆ.
ಚುನಾವಣೆ ಹೇಗೆ ನಡೆಯುತ್ತದೆ?
ಸಂವಿಧಾನದ 66ನೇ ವಿಧಿಯನ್ವಯ ಉಪರಾಷ್ಟ್ರಪತಿ ಚುನಾವಣೆ ಪ್ರತ್ಯಕ್ಷ ಮತದಾನದ ಮೂಲಕ ಅಲ್ಲ. ರಾಜ್ಯಸಭೆಯ 245 ಸದಸ್ಯರು (233 ಚುನಾಯಿತ + 12 ನಾಮನಿರ್ದೇಶಿತ) ಹಾಗೂ ಲೋಕಸಭೆಯ 543 ಸದಸ್ಯರು ಸೇರಿ ಒಟ್ಟು 788 ಸಂಸದರು ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ.
ಈ ಮತದಾನ ರಹಸ್ಯವಾಗಿದೆ ಹಾಗೂ ಎಕ್ಸ್ಕ್ಲುಸಿವ್ ಪ್ರಪೋರ್ಷನಲ್ ರೆಪ್ರೆಸೆಂಟೇಶನ್ ಪದ್ಧತಿಯಲ್ಲಿ – Single Transferable Vote (ಏಕ ವರ್ಗಾವಣೆ ಮತ ಪದ್ಧತಿ) ಮೂಲಕ ನಡೆಯುತ್ತದೆ. ಮತದಾರರು ತಮ್ಮ ಆದ್ಯತೆಯ ಕ್ರಮದಲ್ಲಿ ಅಭ್ಯರ್ಥಿಗಳನ್ನು ಆಯ್ಕೆಮಾಡುತ್ತಾರೆ.
ಮೊದಲ ಸುತ್ತಿನಲ್ಲಿ ಯಾವುದೇ ಅಭ್ಯರ್ಥಿಗೆ ಬಹುಮತ (50% + 1 ಮಾನ್ಯ ಮತ) ಸಿಗದಿದ್ದರೆ, ಅತಿ ಕಡಿಮೆ ಮತ ಪಡೆದವರನ್ನು ಹೊರಗಿಟ್ಟು, ಅವರ ಮತಗಳನ್ನು ಮರುಹಂಚಿಸಲಾಗುತ್ತದೆ. ಈ ಪ್ರಕ್ರಿಯೆ ಅಗತ್ಯವಿರುವ ಬಹುಮತ ಸಿಗುವವರೆಗೆ ಮುಂದುವರಿಯುತ್ತದೆ.

ಅರ್ಹತೆಗಳು:
- ಅಭ್ಯರ್ಥಿ ಭಾರತದ ನಾಗರಿಕರಾಗಿರಬೇಕು
- ಕನಿಷ್ಠ 35 ವರ್ಷ ವಯಸ್ಸು ಹೊಂದಿರಬೇಕು
- ರಾಜ್ಯಸಭೆಗೆ ಆಯ್ಕೆಯಾಗುವ ಅರ್ಹತೆ ಇರಬೇಕು
- ಸರಕಾರ ಅಥವಾ ಸಾರ್ವಜನಿಕ ಸಂಸ್ಥೆಗಳಲ್ಲಿ ನೌಕರರಾಗಿರಬಾರದು
- ಕನಿಷ್ಠ 20 ಪ್ರಸ್ತಾವಕರು ಹಾಗೂ 20 ಸಮರ್ಥಕರು ಅಗತ್ಯ
- ₹15,000 ಭದ್ರತಾ ಠೇವಣಿ ಇಡಬೇಕಾಗುತ್ತದೆ
