ಬೆಂಗಳೂರು, ಆ. 6: ಫ್ಲಿಪ್ಕಾರ್ಟ್ ಫೌಂಡೇಶನ್ ಮತ್ತು ದಿ ಅಕ್ಷಯ ಪಾತ್ರ ಫೌಂಡೇಶನ್ ಸಹಯೋಗದಲ್ಲಿ ಕರ್ನಾಟಕದ ಬೆಂಗಳೂರು ಹಾಗೂ ಹುಬ್ಬಳ್ಳಿ ನಗರಗಳ 1 ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಮುಂಜಾನೆಯ ಉಪಾಹಾರ ವಿತರಿಸುವ ಮಹತ್ವದ ಯೋಜನೆ ಯಶಸ್ವಿಯಾಗಿ ಜಾರಿಯಾಗಿದೆ.
ಅಕ್ಷಯ ಪಾತ್ರದ ಮಾರ್ನಿಂಗ್ ನ್ಯೂಟ್ರಿಷನ್ ಪ್ರೋಗ್ರಾಮ್ ಅಡಿಯಲ್ಲಿ ಅನುಷ್ಠಾನಗೊಂಡ ಈ ಯೋಜನೆಯ ಮೂಲಕ 21 ಲಕ್ಷಕ್ಕೂ ಹೆಚ್ಚು ಬಾರಿ ಪೌಷ್ಟಿಕ ಉಪಾಹಾರ ವಿತರಿಸಲಾಗಿದ್ದು, ಶಾಲಾ ಮಕ್ಕಳ ಹಸಿವನ್ನು ನೀಗಿಸಿ ಕಲಿಕೆಗೆ ಅಗತ್ಯವಾದ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ನೆರವಾಗಿದೆ. ಈ ಕಾರ್ಯಕ್ರಮವು ಭಾರತ ಸರ್ಕಾರದ ಪಿಎಂ ಪೋಷಣ್ ಯೋಜನೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ.
ಅಕ್ಷಯ ಪಾತ್ರದ ಸುಸ್ಥಾಪಿತ ಅಡುಗೆಮನೆ ಹಾಗೂ ವಿತರಣಾ ಜಾಲದ ಮೂಲಕ ಎಲ್ಲಾ ಶಾಲೆಗಳಿಗೆ ಶೇ.100ರಷ್ಟು ಸಮಯಕ್ಕೆ ಸರಿಯಾಗಿ ಉಪಾಹಾರ ತಲುಪಿಸಲಾಗಿದೆ. ನೇರ ಫಲಾನುಭವಿಗಳ ಜೊತೆಗೆ ಅವರ ಕುಟುಂಬಗಳು ಮತ್ತು ಸಮುದಾಯ ಸೇರಿದಂತೆ 4 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಈ ಯೋಜನೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಅಂದಾಜಿಸಲಾಗಿದೆ.
ಹುಬ್ಬಳ್ಳಿಯ 6ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ಜೀರಗಿ ಸೇರಿದಂತೆ ಹಲವು ಮಕ್ಕಳಿಗೆ ಈ ಉಪಾಹಾರವೇ ದಿನದ ಮೊದಲ ಊಟವಾಗಿದ್ದು, ಇದರ ಪರಿಣಾಮವಾಗಿ ವಿದ್ಯಾರ್ಥಿಗಳ ತರಗತಿ ಪಾಲ್ಗೊಳ್ಳುವಿಕೆ ಹಾಗೂ ಏಕಾಗ್ರತೆ ಹೆಚ್ಚಿರುವುದನ್ನು ಶಿಕ್ಷಕರು ಗಮನಿಸಿರುವುದಾಗಿ ಸಂಸ್ಥೆ ತಿಳಿಸಿದೆ.
ಫ್ಲಿಪ್ಕಾರ್ಟ್ ಫೌಂಡೇಶನ್ ಆಡಳಿತ ಮಂಡಳಿ ಸದಸ್ಯ ಹಾಗೂ ಫ್ಲಿಪ್ಕಾರ್ಟ್ ಗ್ರೂಪ್ನ ಮುಖ್ಯ ಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ ರಜನೀಶ್ ಕುಮಾರ್ ಮಾತನಾಡಿ, “ಪ್ರತಿಯೊಬ್ಬ ಮಗುವಿಗೂ ಕಲಿಯಲು ಸಿದ್ಧವಾಗಿ ಶಾಲೆಗೆ ಬರುವ ಹಕ್ಕಿದೆ. ಅದಕ್ಕೆ ಉತ್ತಮ ಪೌಷ್ಟಿಕಾಂಶವೇ ಮೂಲ. ಅಕ್ಷಯ ಪಾತ್ರದೊಂದಿಗೆ ಕೈಜೋಡಿಸುವ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೌಷ್ಟಿಕ ಉಪಾಹಾರ ತಲುಪಿಸಲು ಸಾಧ್ಯವಾಗಿದೆ. ಸುಸ್ಥಿರ ಸಾಮಾಜಿಕ ಬದಲಾವಣೆಗೆ ಇಂತಹ ಸಹಭಾಗಿತ್ವಗಳು ಅಗತ್ಯ” ಎಂದು ಹೇಳಿದರು.
ದಿ ಅಕ್ಷಯ ಪಾತ್ರ ಫೌಂಡೇಶನ್ನ ಸಿಇಒ ಶ್ರೀಧರ್ ವೆಂಕಟ್ ಮಾತನಾಡಿ, “ಹಸಿವಿನಿಂದ ಶಾಲೆಗೆ ಬರುವ ಮಕ್ಕಳಿಗೆ ಕಲಿಕೆಯ ಮೇಲೆ ಗಮನ ಕೇಂದ್ರೀಕರಿಸುವುದು ಕಷ್ಟ. ಈ ಸಹಯೋಗದಿಂದ ಹೆಚ್ಚಿನ ಮಕ್ಕಳಿಗೆ ಪೌಷ್ಟಿಕ ಉಪಾಹಾರ ಒದಗಿಸಿ ಅವರ ಶಿಕ್ಷಣಕ್ಕೆ ಬೆಂಬಲ ನೀಡಲು ಸಾಧ್ಯವಾಗಿದೆ. ಯಾವುದೇ ಮಗುವಿನ ಶಿಕ್ಷಣ ಹಸಿವಿನಿಂದ ಕುಂಠಿತವಾಗಬಾರದು ಎಂಬುದು ನಮ್ಮ ಗುರಿ” ಎಂದು ಹೇಳಿದರು.
2022ರಿಂದ ಫ್ಲಿಪ್ಕಾರ್ಟ್ ಫೌಂಡೇಶನ್ ದೇಶದಾದ್ಯಂತ 41.4 ಲಕ್ಷಕ್ಕೂ ಹೆಚ್ಚು ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದ್ದು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಪರಿಸರ ಹೊಣೆಗಾರಿಕೆ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.
