ಕೆ.ಆರ್.ಪೇಟೆ, ಆ. 6: ಹೇಮಾವತಿ ಜಲಾಶಯದಲ್ಲಿ 23 ಟಿಎಂಸಿ ನೀರು ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ತಕ್ಷಣವೇ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಸಾಹುಕಾರ್ ಚನ್ನಯ್ಯ ನಾಲೆ ಸೇರಿದಂತೆ ವಿವಿಧ ನಾಲೆಗಳಿಗೆ ನೀರು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಬೇಕು. ಇಲ್ಲವಾದರೆ ರೈತರೊಂದಿಗೆ ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಶಾಸಕ ಹೆಚ್.ಟಿ. ಮಂಜು ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹೇಮಾವತಿ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದು, ಶೀಘ್ರದಲ್ಲೇ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸುವಂತೆ ಹಾಸನ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರಿಗೆ ಸೂಚನೆ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಹಾಗೂ ಹೇಮಗಿರಿ ಅಣೆಕಟ್ಟುಗಳು ಕೆ.ಆರ್.ಎಸ್. ಮತ್ತು ಹೇಮಾವತಿ ಜಲಾಶಯ ನಿರ್ಮಾಣಕ್ಕೂ ಮುನ್ನವೇ ಮೈಸೂರು ಮಹಾರಾಜರ ಅವಧಿಯಲ್ಲಿ ನಿರ್ಮಾಣವಾಗಿರುವುದರಿಂದ ಅವುಗಳಿಗೆ ಜಲವಿವಾದದ ತಕರಾರು ಅನ್ವಯಿಸುವುದಿಲ್ಲ. ಆದರೂ ರೈತರು ಬೆಳೆ ಬೆಳೆಯದಂತೆ ಅಧಿಕಾರಿಗಳು ಪ್ರಕಟಣೆ ನೀಡಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಸಮಯಕ್ಕೆ ಕೃಷಿ ಚಟುವಟಿಕೆ ಆರಂಭಿಸಲು ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ವಿಳಂಬವಾದರೆ ಹವಾಮಾನ ವೈಪರೀತ್ಯದಿಂದ ಉತ್ತಮ ಇಳುವರಿ ಪಡೆಯುವುದು ಕಷ್ಟವಾಗಲಿದೆ ಎಂದು ಅವರು ಹೇಳಿದರು.

ಸಾಹುಕಾರ್ ಚನ್ನಯ್ಯ ನಾಲೆಯ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ ಕೆ.ಆರ್.ಪೇಟೆ ತಾಲೂಕಿನ 90ಕ್ಕೂ ಹೆಚ್ಚು ಕೆರೆಕಟ್ಟೆಗಳನ್ನು ತುಂಬಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ ಅವರು, ರೈತರ ಹಿತದೃಷ್ಟಿಯಿಂದ ತುರ್ತು ಕ್ರಮ ಕೈಗೊಳ್ಳಬೇಕು. ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ರೈತರೊಂದಿಗೆ ಸೇರಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ನಾಲೆಗಳ ಸಿಲ್ಟ್ ಹಾಗೂ ಜಂಗಲ್ ತೆರವು ಕಾಮಗಾರಿಯನ್ನು ಆರು ತಿಂಗಳ ಹಿಂದೆಯೇ ಪೂರ್ಣಗೊಳಿಸಬೇಕಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ವಿಳಂಬವಾಗಿದ್ದು, ತಕ್ಷಣವೇ ಸ್ವಚ್ಛತಾ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ವಳಗೆರೆ ಮೆಣಸ ಕೆರೆಯಲ್ಲಿ 20ಕ್ಕೂ ಹೆಚ್ಚು ಎಕರೆ ಪ್ರದೇಶ ಒತ್ತುವರಿಯಾಗಿರುವುದನ್ನು ತಾವು ಪರಿಶೀಲಿಸಿರುವುದಾಗಿ ತಿಳಿಸಿದ ಶಾಸಕ ಮಂಜು, ಕೆರೆಗಳ ಒತ್ತುವರಿಯಿಂದ ಅಂತರ್ಜಲ ಮಟ್ಟ ಕುಸಿಯುವ ಅಪಾಯವಿರುವುದರಿಂದ ರೈತರು ಒತ್ತುವರಿಗೆ ಮುಂದಾಗಬಾರದು ಎಂದು ಮನವಿ ಮಾಡಿದರು. ಬದಲಾಗಿ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಕೃಷಿ ಮಾಡುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಹೇಮಾವತಿ ನೀರಾವರಿ ಇಲಾಖೆಯ ನಂ.3 ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಸೇರಿದಂತೆ ವಿವಿಧ ವಿಭಾಗಗಳ ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
- ಶ್ರೀನಿವಾಸ್ ಆರ್.
