ಹಾಸನ: ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ರಾಜ್ಯ ಸರ್ಕಾರ ತಕ್ಷಣವೇ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ದಸಂಸ, ಕರ್ನಾಟಕ ಮಾದಿಗ ದಂಡೋರ ಸಮಿತಿ, ಜಾಂಬವ ಯುವಸೇನೆ ಹಾಗೂ ಬಾಬು ಜಗಜೀವನ್ ರಾಂ ಒಕ್ಕೂಟದವರು ನಗರದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ತಮಟೆ ಬಡಿತ, ಘೋಷಣೆಗಳೊಂದಿಗೆ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಎನ್.ಆರ್.ವೃತ್ತದ ಮೂಲಕ ಡಿಸಿ ಕಚೇರಿ ತಲುಪಿದರು. ಈ ವೇಳೆ ಶೀಘ್ರವೇ ನ್ಯಾ.ನಾಗಮೋಹನ್ದಾಸ್ ಆಯೋಗದ ವರದಿ ಆಧರಿಸಿ ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ವಿರೂಪಾಕ್ಷಿಪುರ ಪ್ರಕಾಶ್, 2024 ಆ.1ರಂದೇ ಸುಪ್ರೀಂಕೋರ್ಟ್ ಆದೇಶ ಮಾಡಿದ್ದರೂ, ಕರ್ನಾಟಕ ಸರ್ಕಾರ ತೀರ್ಪು ಜಾರಿ ಮಾಡಲು ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ದೂರಿದರು. ಇದು ನಮ್ಮ ಸಮುದಾಯದಲ್ಲಿ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ, ಇದರಿಂದಾಗಿ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು, ಮಹಿಳೆಯರು ಹಾಗೂ ಒಟ್ಟಾರೆ ನಮ್ಮ ಸಮಾಜದವರು ನ್ಯಾಯಯುತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆತಂಕ ಹೊರ ಹಾಕಿದರು.
ಒಳ ಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಆದರೂ ಕೂಡ ದಲಿತ ಸಮುದಾಯದ ಸಚಿವರು ಹಾಗೂ ಶಾಸಕರು ಮೌನವಹಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ದಿನಾಚರಣೆಯೊಳಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಒಳಮೀಸಲಾತಿ ಅನುಷ್ಠಾನಗೊಳಿಸಬೇಕು ಅಥವಾ ಮುಂದಿನ ಅಧಿವೇಶನದಲ್ಲೇ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನಾದರೂ 35 ವರ್ಷಗಳ ನಮ್ಮ ಬೇಡಿಕೆಯಂತೆ ಒಳ ಮೀಸಲಾತಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು, ವಕೀಲರು, ಮಹಿಳೆಯರು ಸೇರಿ ಕರ್ನಾಟಕ ಬಂದ್ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದರು.
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರು, ಜಿಪಂ ಮಾಜಿ ಸದಸ್ಯೆ ವತ್ಸಲಾ ಶೇಖರಪ್ಪ, ನಾಗವೇದಿ ಶೇಖರಪ್ಪ, ಕರ್ನಾಟಕ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಎಂ.ಟಿ.ವೆಂಕಟೇಶ್, ಹೊಳೆನರಸೀಪುರ ಮಂಜು, ಲೋಕೇಶ್ ಆರ್.ಕ್ಯಾತನಹಳ್ಳಿ, ಮಹೇಶ್ ಬಾಣಾವರ, ಭಾಸ್ಕರ್ ಜಾಜೂರು, ಗೋವಿಂದ್ ರಾಜು ಹೊಸೂರು, ಸಿದ್ದೇಶ್, ಲಿಂಗರಾಜು, ಮೂಡಲಯ್ಯ ಮೊದಲಾದವರಿದ್ದರು.
