ಚನ್ನರಾಯಪಟ್ಟಣ, ಆ.17 : ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕವಾಗಿ ಅವಹೇಳನಕಾರಿ ಟೀಕೆಗಳನ್ನು ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ತಾಲೂಕು ಧರ್ಮರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಮುಖ್ಯ ಬೀದಿಯಲ್ಲಿ ಶನಿವಾರ ಬೃಹತ್ ಪ್ರತಿಭಟನೆ ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಚ್.ಎಲ್. ಲೋಕೇಶ್, “ಹಿಂದುಗಳ ಪವಿತ್ರ ಕ್ಷೇತ್ರವಾದ ಧರ್ಮಸ್ಥಳದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಸೌಜನ್ಯಗೌಡ ಎಂಬ ಯುವತಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಗಟ್ಟಿಯಾಗಿ ತನಿಖೆ ನಡೆದು, ಕುಟುಂಬಕ್ಕೆ ನ್ಯಾಯ ದೊರಕಬೇಕು ಎಂಬುದರಲ್ಲಿ ನಮಗೂ ಒಪ್ಪಿದೆ. ಆದರೆ ಆ ಪ್ರಕರಣದ ಹೆಸರಿನಲ್ಲಿ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಕಪ್ಪುಚುಕ್ಕಿ ತರುವ ಪ್ರಯತ್ನವನ್ನು ನಾವು ಸಹಿಸೋದಿಲ್ಲ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಿ.ಕೆ. ಕುಸುಮರಾಣಿ, ಸಮಾಜ ಸೇವಕ ಮಲ್ಲಿಕಾರ್ಜುನ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಣತಿ ಆನಂದ್, ವೆಂಕಟೇಶ್, ಪುರಸಭಾ ಮಾಜಿ ಅಧ್ಯಕ್ಷ ಶಶಿಧರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೋಕೇಶ್, ಕೆಂಪೇಗೌಡ ವೇದಿಕೆಯ ರಾಜ್ಯಾಧ್ಯಕ್ಷ ಆನಂದ್ ಕಾಳೆನಹಳ್ಳಿ, ಪರಿಸರ ಪ್ರೇಮಿ ಸಿ.ಎನ್. ಅಶೋಕ್, ರೈತ ಮುಖಂಡ ಅರಳಾಪುರ ಮಂಜೇಗೌಡ, ಬಿಜೆಪಿ ಮುಖಂಡ ಚಿದಾನಂದ್, ನಿಂಬೆಹಳ್ಳಿ ಗಿರೀಶ್, ಹಿಂದೂ ಸಂಘಟನೆಯ ಮುಖಂಡ ಗಜಾನನ ಮನೋಹರ್, ಮಹಿಳಾ ಸಂಘಟನೆಯ ಮುಖಂಡ ಯಶೋಧಾ ಜೈನ್ ಹಾಗೂ ಅನೇಕರು ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಭಾಗವಹಿಸಿದವರು “ಧರ್ಮಸ್ಥಳದ ಅವಹೇಳನವನ್ನು ನಿಲ್ಲಿಸಬೇಕು”, “ಸೌಜನ್ಯಗೆ ನ್ಯಾಯ ಸಿಗಬೇಕು” ಎಂಬ ಘೋಷಣೆಗಳನ್ನು ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
