ಬೆಂಗಳೂರು, ಆಗಸ್ಟ್ 21 : ರಾಜ್ಯದಾದ್ಯಂತ ಕಳೆದ ಎರಡು ತಿಂಗಳಿನಿಂದ ನಿಲ್ಲಿಸಲಾಗಿದ್ದ ಬೈಕ್ ಟ್ಯಾಕ್ಸಿ ಸೇವೆ ಇಂದು (ಆಗಸ್ಟ್ 21) ಪುನರಾರಂಭಗೊಂಡಿದೆ. ಹೈಕೋರ್ಟ್ನ ನಿರ್ದೇಶನದ ಮೇರೆಗೆ ಜೂನ್ 16ರಿಂದ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಿ ಸರ್ಕಾರ ಸೇವೆ ಮರುಪ್ರಾರಂಭಿಸಿದೆ.
ಸದ್ಯ ಓಲಾ ಹೊರತುಪಡಿಸಿ ಉಬರ್ ಮತ್ತು ರ್ಯಾಪಿಡೋ ಆ್ಯಪ್ಗಳ ಮೂಲಕ ಮಾತ್ರ ಸೇವೆ ಲಭ್ಯವಿದೆ. ಆಟೋ ಮತ್ತು ಕ್ಯಾಬ್ಗಳಿಗೆ ದುಬಾರಿ ಹಣ ಪಾವತಿಸುತ್ತಿದ್ದ ಪ್ರಯಾಣಿಕರಿಗೆ ಬೈಕ್ ಟ್ಯಾಕ್ಸಿ ಸೇವೆಯ ಮರುಪ್ರಾರಂಭ ಸ್ವಲ್ಪ ಮಟ್ಟಿನ ನಿರಾಳತೆಯನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಜೂನ್ 16ರಿಂದ ರಾಜ್ಯದಾದ್ಯಂತ ಬೈಕ್ ಟ್ಯಾಕ್ಸಿ ಸೇವೆಯನ್ನು ಸುರಕ್ಷತಾ ಕಾರಣಗಳಿಂದ ನಿಲ್ಲಿಸಲಾಗಿತ್ತು. ಆ ಅವಧಿಯಲ್ಲಿ ಅನಧಿಕೃತವಾಗಿ ಸಂಚರಿಸಿದ ಬೈಕ್ ಟ್ಯಾಕ್ಸಿಗಳ ವಿರುದ್ಧ ಆರ್ಟಿಓ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು.
ಬೈಕ್ ಟ್ಯಾಕ್ಸಿ ಸೇವೆಯನ್ನು ನಿಷೇಧಿಸಿದ ನಿರ್ಧಾರವನ್ನು ಪ್ರಶ್ನಿಸಿ ಆ್ಯಪ್ ಆಧಾರಿತ ಕಂಪನಿಗಳು ಹೈಕೋರ್ಟ್ ಮೊರೆ ಹೋಗಿದ್ದವು. ವಿಚಾರಣೆ ವೇಳೆ, ಬೈಕ್ ಟ್ಯಾಕ್ಸಿಗೆ ಸಂಬಂಧಿಸಿದಂತೆ ಸ್ಪಷ್ಟವಾದ ನೀತಿ ಚೌಕಟ್ಟು ರೂಪಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಲಾಗಿದೆ.
ಪ್ರಸ್ತುತ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಸೇವೆ ಮರುಪ್ರಾರಂಭಿಸಿದ್ದು, ಶೀಘ್ರದಲ್ಲೇ ಬೈಕ್ ಟ್ಯಾಕ್ಸಿ ಕುರಿತ ಸಮಗ್ರ ನೀತಿಯನ್ನು ಹೊರತರುವ ನಿರೀಕ್ಷೆಯಿದೆ.
