ಕೆ.ಆರ್.ಪೇಟೆ, ನ.4:* ಅಂಗನವಾಡಿ, ಬಿಸಿಯೂಟ, ಆಶಾ ಸೇರಿದಂತೆ ಎಲ್ಲಾ ಯೋಜನಾ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ಕೂಲಿ ಕಾಯ್ದೆಯಂತೆ ತಿಂಗಳಿಗೆ ರೂ.36,000 ವೇತನ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ, ಕೆ.ಆರ್.ಪೇಟೆ ತಾಲ್ಲೂಕು ಸಮಿತಿ ವತಿಯಿಂದ ಇಂದು ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲ್ಲೂಕು ಮಟ್ಟದ ಬೃಹತ್ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷೆ *ಭಾಗ್ಯಮ್ಮ* ರವರು ವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷೆ *ಮಹದೇವಮ್ಮ* ರವರು, “ಶಾಲೆಗಳಲ್ಲಿ ಮಕ್ಕಳಿಗೆ ಅಡುಗೆ ಮಾಡಿ ಬಡಿಸುವ ಬಿಸಿಯೂಟ ನೌಕರರು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದುಡಿದರೂ ಕೇವಲ 3-4 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಇದು ಬ್ರಿಟಿಷರ ಕಾಲದ ಕೂಲಿ ಪದ್ಧತಿಗಿಂತಲೂ ಕಡೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವರನ್ನು ಕಾರ್ಮಿಕರೇ ಅಲ್ಲ ಎಂದು ಹೇಳಿ ಶೋಷಣೆ ಮಾಡುತ್ತಿವೆ. ಇನ್ನು ಈ ಅನ್ಯಾಯ ಸಹಿಸುವುದಿಲ್ಲ. ಡಿಸೆಂಬರ್ 1 ಮತ್ತು 2 ರಂದು ದೆಹಲಿಯಲ್ಲಿ ನಡೆಯಲಿರುವ ಅಖಿಲ ಭಾರತ ಮಟ್ಟದ ‘ಕಾರ್ಮಿಕರ ನಡಿಗೆ ಸಂಸತ್ತಿನ ಕಡೆಗೆ – ದೆಹಲಿ ಚಲೋ’ ಚಳವಳಿಯಲ್ಲಿ ದೇಶದ ಲಕ್ಷಾಂತರ ಯೋಜನಾ ನೌಕರರು ಭಾಗವಹಿಸಲಿದ್ದಾರೆ. ಕೆ.ಆರ್.ಪೇಟೆಯಿಂದಲೂ ನೂರಾರು ನೌಕರರು ದೆಹಲಿಗೆ ಹೋಗಬೇಕು” ಎಂದು ಕರೆ ನೀಡಿದರು.

ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು, ಯೋಜನಾ ನೌಕರರಿಗೆ ಕನಿಷ್ಠ ಕೂಲಿ, ಪಿಂಚಣಿ, ಇಎಸ್ಐ, ಪಿಎಫ್ ಸೌಲಭ್ಯ, ಕೆಲಸದ ಭದ್ರತೆ ನೀಡಬೇಕು. ಬಿಸಿಯೂಟ ಯೋಜನೆಯನ್ನು ಖಾಸಗೀಕರಣ ಮಾಡುವ ಹುನ್ನಾರವನ್ನು ಕೈಬಿಡಬೇಕು. ದೆಹಲಿ ಚಲೋ ಕೇವಲ ಒಂದು ಪ್ರತಿಭಟನೆಯಲ್ಲ, ಇದು ನಮ್ಮ ಬದುಕಿನ ಹೋರಾಟ” ಎಂದು ಹೇಳಿದರು.

*ಪ್ರಮುಖ ಬೇಡಿಕೆಗಳು:*
ಯೋಜನಾ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು
ಬಿಸಿಯೂಟ ನೌಕರರಿಗೆ ಕನಿಷ್ಠ ಕೂಲಿ ರೂ.36,000 ನಿಗದಿ ಮಾಡಬೇಕು
ಕೆಲಸದ ಭದ್ರತೆ, ಪಿಂಚಣಿ, ಇಎಸ್ಐ, ಪಿಎಫ್ ನೀಡಬೇಕು
ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಬೇಕು
ಬಿಸಿಯೂಟ ಯೋಜನೆಯ ಖಾಸಗೀಕರಣ ಕೈಬಿಡಬೇಕು
ದೆಹಲಿ ಚಲೋಗೆ ತಾಲ್ಲೂಕಿನಿಂದ ಬಸ್ ವ್ಯವಸ್ಥೆ ಮಾಡುವುದು, ಪ್ರತಿ ಶಾಲೆಯಲ್ಲಿ ಜಾಗೃತಿ ಸಭೆ ನಡೆಸುವುದು, ಪಟ್ಟಿ ಸಿದ್ಧಪಡಿಸುವುದು ಸೇರಿದಂತೆ ಹಲವು ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು ಎಂದು ತಾಲ್ಲೂಕು ಅಧ್ಯಕ್ಷೆ ಭಾಗ್ಯಮ್ಮ ತಿಳಿಸಿದ್ದಾರೆ.

ಸಭೆಯಲ್ಲಿ ಅಕ್ಷರ ದಾಸೋಹ ಸಹಾಯ ನಿರ್ದೇಶಕ ಸಿ.ಎನ್. ಯತೀಶ್ , ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ *ನಾಗರಾಜ್ ಮೋದೂರು,* ಪ್ರಧಾನ ಕಾರ್ಯದರ್ಶಿ *ರೂಪ,*ಸಿ.ಐ.ಟಿ.ಯು ಸಂಚಾಲಕರು ಹಾಗೂ ಗ್ರಾಮ ಪಂಚಾಯತ್ ನೌಕರರ ಸಂಘದ ಕಾರ್ಯದರ್ಶಿ ಆನಂದ್* ಸೇರಿದಂತೆ ತಾಲ್ಲೂಕಿನ ವಿವಿಧ ಹೋಬಳಿಗಳಿಂದ ಆಗಮಿಸಿದ್ದ ನೂರಾರು ಬಿಸಿಯೂಟ ನೌಕರರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
