ಚನ್ನರಾಯಪಟ್ಟಣ: ಲಯನ್ಸ್ ಕ್ಲಬ್ ಅರಸೀಕೆರೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಚನ್ನರಾಯಪಟ್ಟಣ ತಾಲ್ಲೂಕು ಘಟಕ, ಪುನರ್ಜೀವ ಸ್ವಯಂಸೇವಾ ಸಂಸ್ಥೆ ಹಾಗೂ ಚನ್ನರಾಯಪಟ್ಟಣ ಸ್ವಯಂಪ್ರೇರಿತ ರಕ್ತ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಅರಸೀಕೆರೆಯ ಗಣಪತಿ ಆಸ್ಥಾನ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಲಯನ್ಸ್ ಕ್ಲಬ್ ಅರಸೀಕೆರೆಯ ಅಧ್ಯಕ್ಷ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಭರತ್ ಕುಮಾರ್ ಎಚ್.ಜಿ. ಹಾಗೂ ಗಣ್ಯರು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭರತ್ ಕುಮಾರ್, ಆರೋಗ್ಯವೇ ಮನುಷ್ಯನಿಗೆ ಬಹುದೊಡ್ಡ ಭಾಗ್ಯ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ವಿವಿಧ ಆಸ್ಪತ್ರೆಗಳ ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗಿದೆ. ಇಲ್ಲಿ ಉಚಿತ ಕಣ್ಣಿನ ತಪಾಸಣೆ, ರಕ್ತದೊತ್ತಡ, ಮಧುಮೇಹ, ಹೃದಯ ತಪಾಸಣೆ, ಇಸಿಜಿ, ಕ್ಯಾನ್ಸರ್ ತಪಾಸಣೆ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಜೊತೆಗೆ ರಕ್ತದಾನ ಶಿಬಿರವನ್ನೂ ಆಯೋಜಿಸಿದ್ದು, ಸಂಗ್ರಹವಾಗುವ ರಕ್ತವು ಅಗತ್ಯವಿರುವ ರೋಗಿಗಳಿಗೆ ನೆರವಾಗಲಿದೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಡಾ. ಸುದೀಪ್ ರೈ ಮಾತನಾಡಿ, ಆರೋಗ್ಯ ತಪಾಸಣಾ ಶಿಬಿರದಿಂದ ನೂರಾರು ಜನರಿಗೆ ಅನುಕೂಲವಾಗಲಿದೆ. ರಕ್ತದಾನ ಮಹಾದಾನವಾಗಿದ್ದು, ದಾನಿಗಳು ನೀಡುವ ರಕ್ತ ಹಲವು ರೋಗಿಗಳ ಜೀವ ಉಳಿಸಲು ನೆರವಾಗುತ್ತದೆ ಎಂದರು.
ಡಾ. ಬಿ.ವಿ. ಶೆಟ್ಟಿ ಮಾತನಾಡಿ, ವೈದ್ಯಕೀಯ ಸೇವೆಯಲ್ಲಿ ರಕ್ತದ ಕೊರತೆಯಿಂದ ರೋಗಿಗಳು ಎದುರಿಸುವ ಸಮಸ್ಯೆಗಳನ್ನು ಕಾಣುತ್ತಿದ್ದೇವೆ. ರಕ್ತನಿಧಿ ಕೇಂದ್ರಗಳಲ್ಲಿ ಅಗತ್ಯ ಸಮಯದಲ್ಲಿ ರಕ್ತ ದೊರೆಯದ ಸಂದರ್ಭಗಳೂ ಇವೆ. ಆದ್ದರಿಂದ ಸಾರ್ವಜನಿಕ ವಲಯದಲ್ಲಿ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು. ಯುವಕರು ಹಾಗೂ ಆರೋಗ್ಯವಂತರು ಸ್ವಯಂಪ್ರೇರಿತರಾಗಿ ರಕ್ತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ. ರಜತ್ ಹಾಗೂ ಡಾ. ಪಾಷಾ ಸೇರಿದಂತೆ ಇತರ ವೈದ್ಯರು ಸ್ವತಃ ರಕ್ತದಾನ ಮಾಡುವ ಮೂಲಕ ಸಾರ್ವಜನಿಕರಲ್ಲಿ ರಕ್ತದಾನದ ಜಾಗೃತಿ ಮೂಡಿಸಿದರು.
ಶಿಬಿರದಲ್ಲಿ 314ಕ್ಕೂ ಹೆಚ್ಚು ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಲಯನ್ಸ್ ಕ್ಲಬ್ ಅರಸೀಕೆರೆಯ ಕಾರ್ಯದರ್ಶಿ ಪರಮೇಶ್, ಎಸ್.ಎಸ್. ಆಸ್ಪತ್ರೆಯ ವೈದ್ಯ ಡಾ. ಶಿವಕುಮಾರ್, ಲಯನ್ಸ್ ಕ್ಲಬ್ನ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣಪತಿ ಆಸ್ಥಾನ ಮಂಟಪದ ಗೌರವಾನ್ವಿತರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
