ಹಾಸನ, ಆ.28: ರಾಜ್ಯ ಸರ್ಕಾರ ಮೆರವಣಿಗೆಗಳಲ್ಲಿ ಡಿಜೆ ಬಳಕೆಯನ್ನು ನಿಷೇಧಿಸಿರುವ ನಿರ್ಧಾರವನ್ನು ಈದ್ ಮಿಲಾದ್ ಸಂದರ್ಭದಲ್ಲಿಯೂ ಸ್ವಾಗತಿಸುತ್ತೇವೆ ಎಂದು ಆಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮು. ಬಶೀರ್ ಅಹಮದ್ ಹೇಳಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಈದ್ ಮಿಲಾದ್ ಮೆರವಣಿಗೆಗಳು ಶ್ರದ್ಧೆ, ಭಕ್ತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪ್ರತಿಬಿಂಬಿಸಬೇಕು. ಪ್ರವಾದಿ ಮಹಮ್ಮದ್ ಅವರ ಜೀವನ ಶೈಲಿ, ನಡೆನುಡಿಗಳನ್ನು ಪಾಲಿಸಲು ಈ ಮೆರವಣಿಗೆ ಉದ್ದೇಶಿತವಾಗಿದ್ದು, ಪಾಶ್ಚಾತ್ಯ ಸಂಸ್ಕೃತಿಯ ಡಿಜೆ ಶಬ್ದ ಮಾಲಿನ್ಯಕ್ಕೆ ಇಲ್ಲಿ ಯಾವುದೇ ಸ್ಥಾನವಿಲ್ಲ” ಎಂದರು.
ಡಿಜೆ ಬಳಕೆಯಿಂದ ವೃದ್ಧರು, ಹೃದಯ ಸಂಬಂಧಿ ಕಾಯಿಲೆಯುಳ್ಳವರು, ಸಣ್ಣ ಮಕ್ಕಳಿಗೆ ತೊಂದರೆ ಉಂಟಾಗುವುದರ ಜೊತೆಗೆ ಮೆರವಣಿಗೆಯ ಭಕ್ತಿ-ಆಧ್ಯಾತ್ಮಿಕ ವಾತಾವರಣಕ್ಕೂ ಅಡ್ಡಿ ಉಂಟಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಮೆರವಣಿಗೆಗಳ ವೇಳೆ ಮದ್ಯಪಾನ, ಮಾದಕ ವಸ್ತು ಸೇವನೆ ಮುಂತಾದ ಅಹಿತಕರ ಘಟನೆಗಳನ್ನು ತಪ್ಪಿಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಧಾರ್ಮಿಕ ವಾರ್ಷಿಕ ಕಾರ್ಯಕ್ರಮಗಳು ದೊಡ್ಡ ಮಟ್ಟದಲ್ಲಿ ನಡೆಯಬೇಕಾದರೆ, ಅವನ್ನು ನಗರ ಪ್ರದೇಶದ ಬದಲು ಪಟ್ಟಣದಿಂದ ಹೊರಗಿನ ಕ್ರೀಡಾಂಗಣ ಅಥವಾ ಸೂಕ್ತ ಸ್ಥಳಗಳಲ್ಲಿ ಆಯೋಜಿಸಬಹುದು. ನಗರದಲ್ಲಿ ನಡೆಯುವ ಮೆರವಣಿಗೆ ಸಂದರ್ಭದಲ್ಲಿ ಡಿಜೆ ಬಳಕೆಯ ಜೊತೆಗೆ ವ್ಯಸನಿಗಳಿಂದ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಯ್ಯದ್ ಅನ್ಸರ್, ರಫೀಕ್ ಸವೀರ, ಸೈಯದ್ ಖಾಸಿಂ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
