ಬೆಂಗಳೂರು: ಸರ್ಕಾರಿ ನೌಕರರ ಅಮಾನತ್ತಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದ ಸಂದರ್ಭದಲ್ಲಿಯೂ ನೌಕರರು ತಾನಾಗಿಯೇ ಹಳೆಯ ಹುದ್ದೆಯನ್ನು ವಹಿಸಿಕೊಳ್ಳಬಾರದು ಎಂಬ ಮಹತ್ವದ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.
ಸರ್ಕಾರದ ಸ್ಪಷ್ಟೀಕರಣ ಪ್ರಕಾರ, ನ್ಯಾಯಾಲಯ ಅಮಾನತು ಆದೇಶವನ್ನು ರದ್ದುಪಡಿಸಿದರೂ ಸಹ ಸ್ಥಳನಿಯುಕ್ತಿ ಆದೇಶವನ್ನು ನೀಡುವುದು ಕಡ್ಡಾಯ. ಆದೇಶ ಬರುವ ಮೊದಲು ತಾನಾಗಿಯೇ ಹುದ್ದೆಯನ್ನು ವಹಿಸಿಕೊಂಡರೆ, ಅದು ಅನುಶಾಸನಾತ್ಮಕ ಕ್ರಮಕ್ಕೆ ಒಳಪಟ್ಟ ತಪ್ಪು ಎಂದು ಪರಿಗಣಿಸಲಾಗುವುದು.
ಈ ಕುರಿತು ಸರ್ಕಾರವು 11.10.1989ರ ಅಧಿಕೃತ ಜ್ಞಾಪನದಲ್ಲಿರುವ ಮಾರ್ಗಸೂಚಿಗಳನ್ನು ಪುನರುಚ್ಚರಿಸಿದ್ದು, ಅಮಾನತು ರದ್ದಾದ ನಂತರದ ಅವಧಿಯ ಸೇವೆಯನ್ನು ಕರ್ತವ್ಯಾವಧಿಯಾಗಿ ಪರಿಗಣಿಸಲಾಗುವುದು ಎಂದೂ ಸ್ಪಷ್ಟಪಡಿಸಿದೆ.
ಅದೇ ವೇಳೆ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳಿಗೆ ಈ ಸೂಚನೆಗಳನ್ನು ತಮ್ಮ ವ್ಯಾಪ್ತಿಯ ಶಿಸ್ತು ಪ್ರಾಧಿಕಾರಿಗಳಿಗೆ ತಲುಪಿಸಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ.
