ಚನ್ನರಾಯಪಟ್ಟಣ : ತಾಲ್ಲೂಕಿನ ಗೋವಿನಕೆರೆ ಗ್ರಾಮದಲ್ಲಿ ಕುಡಿತದ ಅಮಲಿನಲ್ಲಿ ಇಬ್ಬರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಡುವೆ ಹೊಡೆದಾಟ ನಡೆದ ಘಟನೆ ಬೆಳಕಿಗೆ ಬಂದಿದೆ. ಆಗಸ್ಟ್ 28ರಂದು ಗ್ರಾಪಂ ಸದಸ್ಯರ ಮನೆಯಲ್ಲಿ ನಡೆದ ಈ ಘಟನೆಯಲ್ಲಿ ಹಿರೀಸಾವೆ ಪಿಡಿಓ ಸತೀಶ ಅವರಿಗೆ ಗಂಭೀರ ಗಾಯವಾಗಿದೆ.
ಮಾಹಿತಿ ಪ್ರಕಾರ, ಗೋವಿನಕೆರೆ ಗ್ರಾಮದ ಗ್ರಾಪಂ ಸದಸ್ಯ ರಾಮು ಅವರ ಮನೆಯಲ್ಲಿ ಗಣೇಶ ಹಬ್ಬದ ಊಟದ ಸಂದರ್ಭದಲ್ಲಿ, ಸತೀಶ ಹಾಗೂ ಎಂ. ಶಿವರ ಪಿಡಿಓ ರಾಮಸ್ವಾಮಿ ನಡುವೆ ಜಗಳ ಉಂಟಾಗಿದೆ. ತಾಲ್ಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆ ವಿಚಾರದಲ್ಲಿ ಇಬ್ಬರ ನಡುವೆ ಮೊದಲುಲೇ ವೈಮನಸ್ಸು ಇತ್ತು.
ಮದ್ಯ ಸೇವನೆಯ ವೇಳೆ ಮಾತಿನ ಚಕಮಕಿ ಹೆಚ್ಚಾಗಿ, ಆಕ್ರೋಶಗೊಂಡ ರಾಮಸ್ವಾಮಿ ಅವರು ಕೈಯಲ್ಲಿ ಇದ್ದ 750 ಎಂ.ಎಲ್. ಬ್ರಾಂಡಿ ಬಾಟಲಿಯಿಂದ ಸತೀಶ ಅವರ ತಲೆಗೆ ಹೊಡೆದಿದ್ದಾರೆ. ಗಾಜಿನ ಚೂರುಗಳು ಮುಖಕ್ಕೆ ಬಿದ್ದು ಸತೀಶರಿಗೆ ತೀವ್ರ ಏಟಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನಾ ಸ್ಥಳದಲ್ಲಿದ್ದವರು ಇಬ್ಬರನ್ನೂ ಬೇರೆಯಾಗಿ ಕಳುಹಿಸಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
