ಬೆರ್ಹಾಂಪುರ (ಒಡಿಶಾ): ಬೆಂಗಳೂರಿನಲ್ಲಿ ವಲಸೆ ಕಾರ್ಮಿಕನಾಗಿ ದುಡಿದು ತನ್ನ ಕುಟುಂಬಕ್ಕೆ ಆಸರೆಯಾಗುತ್ತಿದ್ದ ಒಡಿಶಾದ 19 ವರ್ಷದ ವಿದ್ಯಾರ್ಥಿಯ “ವೈದ್ಯನಾಗಬೇಕು’ ಎಂಬ ಕನಸು ಈಗ ಈಡೇರಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್ ಯುಜಿ)ಯಲ್ಲಿ ರ್ಯಾಂಕ್ ಗಳಿಸುವ ಮೂಲಕ ವಿದ್ಯಾರ್ಥಿ ಶುಭಂ ಸಬರ್ ಈಗ ಒಡಿಶಾದಲ್ಲಿ ಎಂಬಿಬಿಎಸ್ ಕೋರ್ಸ್ಗೆ ಪ್ರವೇಶ ಪಡೆದಿದ್ದಾರೆ.
ಒಡಿಶಾದ ಖುರ್ದಾ ಜಿಲ್ಲೆಯ ಬಡ ಕುಟುಂಬದ ಈ ವಿದ್ಯಾರ್ಥಿ, ತಮ್ಮ ಕುಟುಂಬವನ್ನು ಸಂಭಾಳಿಸಲು ಬೆಂಗಳೂರಿನಲ್ಲಿ ಕಾರ್ಮಿಕನಾಗಿ 3 ತಿಂಗಳು ಕೆಲಸ ಮಾಡಿ, 45,000 ರೂ. ಗಳಿಸಿದ್ದರು. ಈ ಪೈಕಿ 25,000 ರೂ.ಗಳನ್ನು ಉಳಿಸಿದ್ದರು. ಈ ಹಣವು ಎಂಬಿಬಿಎಸ್ ಕೋರ್ಸ್ಗೆ ಸೇರಲು ಸಹಾಯ ಮಾಡಿತು ಎಂದು ಶುಭಂ ಹೇಳಿಕೊಂಡಿದ್ದಾರೆ.
ಬೆಂಗಳೂರಲ್ಲಿ ಕಟ್ಟಡ ಕಾರ್ಮಿಕ
ಈ ಬಗ್ಗೆ ಪ್ರತಿಕ್ರಿಯಿಸಿರುವ ಶುಭಂ, ಕುಟುಂಬಕ್ಕಾಗಿ ಕೆಲಸ ಮಾಡುವುದ ಅನಿವಾರ್ಯವಾಗಿತ್ತು. ಹಾಗಾಗಿ ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆದ ಬಳಿಕ ನಾನು ಬೆಂಗಳೂರಿಗೆ ಬಂದು, ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡಲಾರಂಭಿಸಿದೆ. ಹೀಗೆ ಕೆಲಸ ಮಾಡುತ್ತಿರುವಾಗ ನನ್ನ ಶಿಕ್ಷಕರು ಕರೆ ಮಾಡಿ, ಸಿಹಿ ಹಂಚುವಂತೆ ತಿಳಿಸಿ, “ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ನೀನು ಉತ್ತೀರ್ಣನಾಗಿರುವೆ. ಎಂಬಿಬಿಎಸ್ ಕೋರ್ಸ್ ಖಚಿತವಾಗಿದೆ’ ಎಂದು ಮಾಹಿತಿ ನೀಡಿದರು. ತಾನು ವೈದ್ಯನಾಗಿ ಒಡಿಶಾದ ಜನರಿಗೆ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ನೆರವಿಗೆ ಶುಭಂ ಪೋಷಕರ ಮನವಿ
ಪರಿಶಿಷ್ಟ ಪಂಗಡಗಳ ವಿಭಾಗದಲ್ಲಿ 18,212ನೇ ರ್ಯಾಂಕ್ ಪಡೆದಿರುವ ಶುಭಂ, ಬೆರ್ಹಾಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಪ್ರವೇಶ ಪಡೆದಿದ್ದಾರೆ. ತಮ್ಮ ಮಗ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಲು ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಶುಭಂ ಪೋಷಕರಾದ ಸಹದೇವ್ ಮತ್ತು ರಂಗಿ ಮನವಿ ಮಾಡುತ್ತಿದ್ದಾರೆ
