ಬೆಂಗಳೂರು: ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇಲೆಕ್ಟ್ರಾನಿಕ್ ಮತಯಂತ್ರ (EVM) ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಇನ್ನುಮುಂದೆ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಯಲಿದೆ” ಎಂದು ಘೋಷಿಸಿದರು.

ಇತರ ಪ್ರಮುಖ ತೀರ್ಮಾನಗಳು
-
ಮೆಟ್ರೋ ಹಂತ-3 ಯೋಜನೆಗೆ ಅನುಮೋದನೆ:
ಜೆಪಿನಗರ 4ನೇ ಹಂತದಿಂದ ಹೆಬ್ಬಾಳದವರೆಗೆ, ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಕಡಬಗೆರೆವರೆಗೆ 37.121 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. -
ಮಾರುಕಟ್ಟೆ ಶುಲ್ಕ ಬದಲಾವಣೆ:
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಶುಲ್ಕವನ್ನು 41 ಪೈಸೆಯಿಂದ 42 ಪೈಸೆಗೆ ಹೆಚ್ಚಿಸಲಾಗಿದ್ದು, ವಹಿವಾಟು ವೆಚ್ಚವನ್ನು 0.01 ಪೈಸೆಗೆ ಹೆಚ್ಚಿಸಿ ಮಾರ್ಪಾಡು ಮಾಡಲು ತೀರ್ಮಾನಿಸಲಾಗಿದೆ. -
ಆಶಾಕಿರಣ ಯೋಜನೆ ರಾಜ್ಯವ್ಯಾಪಿ ಅನುಷ್ಠಾನ:
ಅಂಧತ್ವ ನಿವಾರಣೆ ಮತ್ತು ಕಣ್ಣಿನ ಉಚಿತ ತಪಾಸಣೆಗೆ ಸಂಬಂಧಿಸಿದ ಆಶಾಕಿರಣ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು 52.85 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. -
ಹೊಸ ಮೆಡಿಕಲ್ ಕಾಲೇಜು ಸ್ಥಾಪನೆ:
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ರಾಯಸಂದ್ರ ಗ್ರಾಮದಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಉದ್ದೇಶಕ್ಕಾಗಿ ಕರ್ನಾಟಕ ಗೃಹ ಮಂಡಳಿಯಿಂದ 65 ಕೋಟಿ ರೂ. ವೆಚ್ಚದಲ್ಲಿ 25 ಎಕರೆ ಜಮೀನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ.
