ಕೆ.ಆರ್.ಪೇಟೆ,ಸೆ.15: ತಾಲ್ಲೂಕಿನ ಬಿಬಿ.ಕಾವಲು ಗ್ರಾಮದಲ್ಲಿ 3ತಿಂಗಳ ಬಾಣಂತಿ-ಮಗು ಹಾಗೂ ಅನಾರೋಗ್ಯಪೀಡಿತ ವೃದ್ದೆಯನ್ನು ಮನೆಯಿಂದ ಹೊರಗೆ ತಳ್ಳಿ ಮನೆಗೆ ಬೀಗ ಹಾಕಿ ಅಮಾನವೀಯವಾಗಿ ವರ್ತಿಸಿದ ಈಕ್ವಿಟಾಸ್ ಮೈಕ್ರೋ ಫೈನಾನ್ಸ್ ಸಂಸ್ಥೆಯ ವಿರುದ್ದ ತಾಲ್ಲೂಕು ದಲಿತ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಬಿ.ಬಿ.ಕಾವಲು ಗ್ರಾಮದ ವಯೋವೃದ್ದರಾದ ದೇವರಾಜು, ಇವರ ಪತ್ನಿ ಯಶೋಧ ಹಾಗೂ ಪುತ್ರ ಸಂತೋಷ್ ಕುಮಾರ್ ಅವರ ಕುಟುಂಬದ ಮೇಲೆ ದೌರ್ಜನ್ಯ ನಡೆಸಿರುವ ಈಕ್ವಿಟಾಸ್ ಹಣಕಾಸು ಸಂಸ್ಥೆಯ ಅಧಿಕಾರಿಗಳು ಯಾವುದೇ ನೋಟೀಸ್ ಸಹ ನೀಡದೇ ಏಕಾಏಕಿ ಬಂದು ಮನೆಯೊಳಗಿದ್ದ ದೇವರಾಜು ಮತ್ತು ಯಶೋಧ ದಂಪತಿಗಳ ಪುತ್ರಿ 3ತಿಂಗಳ ಬಾಣಂತಿ ಹಾಗೂ ಆಕೆಯ ಮೂರು ತಿಂಗಳ ಮಗು ಹಾಗೂ ಕುಟುಂಬವನ್ನು ಮಾತ್ರೆ ಮತ್ತು ಮಗುವಿನ ಸಿರಾಫ್ ಹಾಗೂ ಕಂಬಳಿಯನ್ನು ತೆಗೆದುಕೊಳ್ಳಲು ಅವಕಾಶ ನೀಡದೇ ಬೀದಿಗೆ ತಳ್ಳಿ ಬೀಗ ಹಾಕಿದ್ದಾರೆ. ದಲಿತ ಕುಟುಂಬದ ಮೇಲೆ ದೌರ್ಜನ್ಯ ಎಸಗಿರುವ ಈಕ್ವಿಟಾಸ್ ಮೈಕ್ರೋ ಫೈನಾನ್ಸ್ ವಿರುದ್ಧ ಕೂಡಲೇ ಅಟ್ರಾಸಿಟಿ ಪ್ರಕರಣ ದಾಖಲಿಸಿ.

ಮಹಿಳಾ ಪೊಲೀಸ್ ಇಲ್ಲದೇ, ಫೈನಾನ್ಸ್ ಸಂಸ್ಥೆಯ ಪುರುಷರೇ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸಿ ಬಾಣಂತಿ ಮತ್ತು ಮಗುವಿಗೆ ಮಾತ್ರೆ ಮತ್ತು ಸಿರಾಫ್ ತೆಗೆದುಕೊಳ್ಳಲು ಸಹ ಅವಕಾಶ ನೀಡದೇ ಏಕಾಏಕಿ ಮನೆಯಿಂದ ಹೊರ ದಬ್ಬಿ ಬೀಗ ಹಾಕುವ ಮೂಲಕ ಮೃಗೀಯವಾಗಿ ವರ್ತಿಸಿರುವ ಈಕ್ವಿಟಾಸ್ ಹಣಕಾಸು ಸಂಸ್ಥೆಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದಲಿತ ಪರ ಸಂಘಟನೆಗಳ ಮುಖಂಡರು, ಈಕ್ವಿಟಾಸ್ ಸಂಸ್ಥೆಯವರು ಕೂಡಲೇ ಮನೆಯ ಬೀಗ ತೆಗೆದು ಕುಟುಂಬಕ್ಕೆ ಬರಗಾಲದಲ್ಲಿ ಕೂಲಿಯೂ ಇಲ್ಲದೇ ಜೀವನ ನಡೆಸುತ್ತಿರುವ ದಲಿತ ಕುಟುಂಬಕ್ಕೆ ತಮ್ಮ ಮನೆಯಲ್ಲಿ ಬದುಕುವ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಕೆ.ಆರ್.ಪೇಟೆ ಪಟ್ಟಣದ ಈಕ್ವಿಟಾಸ್ ಸಂಸ್ಥೆಯ ಮುಂದೆ ಬೃಹತ್ ತಮಟೆ ಚಳುವಳಿ ನಡೆಸಲಾಗುವುದು. ಈಗಾಗಲೇ ಸಾಲವನ್ನು ತೀರಿಸಲು ಅವಕಾಶ ಕಲ್ಪಿಸಬೇಕೆ ಹೊರತು ಈ ರೀತಿ ದಲಿತ ಕುಟುಂಬದ ಮೇಲೆ ದೌರ್ಜನ್ಯ ನಡೆಸುವುದು ಒಳ್ಳೆಯ ಲಕ್ಷಣವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಸಾಲ ನೀಡುವಾಗ 4ಲಕ್ಷ ನೀಡಲು ಅನಕ್ಷರಸ್ಥ ದಲಿತ ಕುಟುಂಬದಿAದ ಬರೋಬ್ಬರಿ 1ಲಕ್ಷ ರೂ ಲಂಚ ಪಡೆದುಕೊಂಡಿರುವ ಈಕ್ವಿಟಾಸ್ ಸಂಸ್ಥೆಯ ನೌಕರನ ವಿರುದ್ದ 420ಕೇಸ್ ದಾಖಲಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ದಲಿತ ಮುಖಂಡರು ಮನೆಯ ಜಗುಲಿಯ ಮೇಲೆ ಆಶ್ರಯ ಪಡೆದಿರುವ ದಲಿತ ಕುಟುಂಬಕ್ಕೆ ಊಟೋಪಚಾರ ನೀಡಿ ನಂತರ ಪತ್ರಕರ್ತರೊಂದಿಗೆ ಮಾತನಾಡಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
– ಶ್ರೀನಿವಾಸ್ ಆರ್.
