ಚನ್ನರಾಯಪಟ್ಟಣ: ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿಯ ಬರಗೂರು ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ, ಕಾರೆಕೆರೆ, ಹಾಸನ ವತಿಯಿಂದ ನಡೆಯುತ್ತಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ (RAWE) ಅಂಗವಾಗಿ ಪ್ರಧಾನಮಂತ್ರಿ ಕಿಸಾನ್ ಮಾನ್ಧನ್ ಯೋಜನೆ (PM-KMY) ಕುರಿತು ರೈತರಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅಂತಿಮ ವರ್ಷದ ಬಿ.ಎಸ್ಸಿ. (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ಹಾಗೂ ಅರ್ಥಶಾಸ್ತ್ರ ವಿಭಾಗದ ಡಾ. ಶಶಿಕಿರಣ್ ಭಾಗವಹಿಸಿ, ಯೋಜನೆಯ ಉದ್ದೇಶ, ಅರ್ಹತೆ, ವಂತಿಗೆ ಹಾಗೂ ಪಿಂಚಣಿ ಸೌಲಭ್ಯಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ರೈತರು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಅವರ ವೃದ್ಧಾಪ್ಯ ಜೀವನಕ್ಕೂ ಆರ್ಥಿಕ ಭದ್ರತೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2019ರಲ್ಲಿ ಪ್ರಧಾನಮಂತ್ರಿ ಕಿಸಾನ್ ಮಾನ್ಧನ್ ಯೋಜನೆಯನ್ನು ಜಾರಿಗೆ ತಂದಿದ್ದು, ಸಣ್ಣ ಮತ್ತು ಅತಿಸಣ್ಣ ರೈತರಿಗೆ ವೃದ್ಧಾಪ್ಯದಲ್ಲಿ ಸಾಮಾಜಿಕ ಭದ್ರತೆ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಡಾ. ಶಶಿಕಿರಣ್ ತಿಳಿಸಿದರು.

ಯೋಜನೆಯಡಿ 18ರಿಂದ 40 ವರ್ಷದೊಳಗಿನ ಅರ್ಹ ಸಣ್ಣ ಮತ್ತು ಅತಿಸಣ್ಣ ರೈತರು ಸೇರ್ಪಡೆಯಾಗಬಹುದಾಗಿದೆ. ರೈತರು ತಮ್ಮ ವಯಸ್ಸಿಗೆ ಅನುಗುಣವಾಗಿ ಮಾಸಿಕ ವಂತಿಗೆ ಪಾವತಿಸಬೇಕಿದ್ದು, ರೈತರು ಪಾವತಿಸುವ ವಂತಿಗೆಗೆ ಕೇಂದ್ರ ಸರ್ಕಾರವೂ ಸಮಾನ ಮೊತ್ತದ ಕೊಡುಗೆ ನೀಡುತ್ತದೆ. 60 ವರ್ಷ ವಯಸ್ಸಿನ ಬಳಿಕ ಅರ್ಹ ಫಲಾನುಭವಿಗಳಿಗೆ ತಿಂಗಳಿಗೆ ₹3,000 ಪಿಂಚಣಿ ದೊರೆಯಲಿದೆ ಎಂದು ವಿವರಿಸಲಾಯಿತು.
ಸೇರ್ಪಡೆಯ ವಯಸ್ಸಿಗೆ ಅನುಗುಣವಾಗಿ ವಂತಿಗೆಯ ಮೊತ್ತ ಬದಲಾಗಲಿದ್ದು, 18 ವರ್ಷದಲ್ಲಿ ಸೇರ್ಪಡೆಯಾಗುವವರು ₹55, 30 ವರ್ಷದಲ್ಲಿ ₹105 ಹಾಗೂ 40 ವರ್ಷದಲ್ಲಿ ₹200 ಮಾಸಿಕ ವಂತಿಗೆ ಪಾವತಿಸಬೇಕಾಗುತ್ತದೆ ಎಂದು ಮಾಹಿತಿ ನೀಡಲಾಯಿತು.
ಬರಗೂರು ಗ್ರಾಮದ 56 ರೈತರಿಗೆ ಯೋಜನೆಯ ಅರ್ಹತೆ, ವಂತಿಗೆ ಪಾವತಿ, ಪಿಂಚಣಿ ಸೌಲಭ್ಯ ಹಾಗೂ ಸಾಮಾಜಿಕ ಭದ್ರತೆಯ ಕುರಿತು ಸರಳವಾಗಿ ವಿವರಿಸಲಾಯಿತು. ರೈತರು ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಇಂತಹ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿ ಕರೆ ನೀಡಲಾಯಿತು.
“ಇಂದಿನ ಸಣ್ಣ ವಂತಿಕೆ–ನಾಳೆಯ ವೃದ್ಧಾಪ್ಯದ ಆರ್ಥಿಕ ಭದ್ರತೆ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ನಡೆಯಿತು.
