ಚನ್ನರಾಯಪಟ್ಟಣ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ, ಶ್ರವಣಬೆಳಗೊಳ ಶ್ರೀ ಪ್ರಸನ್ನ ಗಣಪತಿ ಸಂಘ ಹಾಗೂ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಶನಿವಾರ ಭವ್ಯವಾಗಿ ಆಯೋಜಿಸಲಾಯಿತು.
ನಾರಾಯಣ ಆಸ್ಪತ್ರೆ (ಮೈಸೂರು), ಅಮ್ಮ ಕಣ್ಣಿನ ಆಸ್ಪತ್ರೆ ಹಾಗೂ ಚನ್ನರಾಯಪಟ್ಟಣ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಈ ಶಿಬಿರವನ್ನು ತಾಲ್ಲೂಕು ಘಟಕದ ಚೇರ್ಮನ್ ಎಚ್.ಜಿ. ಭರತ್ ಕುಮಾರ್ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅರುಣ್ ಕುಮಾರ್ ಉದ್ಘಾಟಿಸಿದರು.

ಉದ್ಘಾಟನಾ ಭಾಷಣದಲ್ಲಿ ಭರತ್ ಕುಮಾರ್ ಅವರು, “ಆರೋಗ್ಯವಂತ ಜೀವನಕ್ಕಾಗಿ ಉತ್ತಮ ಗಾಳಿ, ನೀರು, ಆಹಾರ ಮತ್ತು ನೆಮ್ಮದಿಯ ವಾತಾವರಣ ಅಗತ್ಯ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದರಿಂದ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಮಟ್ಟದಲ್ಲಿ ಇಂತಹ ಶಿಬಿರಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಸೇವೆ ನೀಡುತ್ತಿದೆ” ಎಂದು ಹೇಳಿದರು. ಅವರು ರಕ್ತದಾನದ ಮಹತ್ವವನ್ನು ವಿವರಿಸಿ, “ಒಬ್ಬರ ದಾನ ಮಾಡಿದ ರಕ್ತದಿಂದ ಮೂವರ ಜೀವ ಉಳಿಸಬಹುದು. ರಕ್ತದಾನ ಮಹಾದಾನ” ಎಂದರು.

ಡಾ. ಅರುಣ್ ಕುಮಾರ್ ಅವರು ಮಾತನಾಡಿ, ರಕ್ತದಾನವು ದೇಹಕ್ಕೆ ಲಾಭಕರವಾಗಿದ್ದು, ಸಮಾಜಕ್ಕೆ ಅಪಾರ ಉಪಯೋಗ ತರುತ್ತದೆ ಎಂದು ತಿಳಿಸಿದರು.
ಈ ಶಿಬಿರದಲ್ಲಿ ಬಿ.ಪಿ., ಶುಗರ್, ಹೃದಯ, ಕಣ್ಣು, ಸ್ತ್ರೀರೋಗ ತಪಾಸಣೆ ಸೇರಿದಂತೆ ಹಲವು ವೈದ್ಯಕೀಯ ಸೇವೆಗಳು ಒದಗಿಸಲ್ಪಟ್ಟಿದ್ದು, ಒಟ್ಟು 283 ಮಂದಿ ಸಾರ್ವಜನಿಕರು ಶಿಬಿರದ ಅನುಕೂಲ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಶ್ರೀ ಪ್ರಸನ್ನ ಗಣಪತಿ ಸಂಘದ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ಸುಕುಮಾರ್, ವೈದ್ಯಾಧಿಕಾರಿಗಳು, ರೆಡ್ ಕ್ರಾಸ್ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸ್ಥಳೀಯರು ಇಂತಹ ಶಿಬಿರಗಳು ಮುಂದುವರಿಯಲೆಂದು ಆಶಾಭಾವನೆ ವ್ಯಕ್ತಪಡಿಸಿದರು.
– ಮಂಜುನಾಥ ಐ.ಕೆ
