ಹಾಸನ: ಕಂಠಪೂರ್ತಿ ಮದ್ಯ ಸೇವಿಸಿದ ಐವರು ಗ್ರಾಹಕರು ಬಿಲ್ ಕೇಳಿದ ಸಿಬ್ಬಂದಿಗೆ ಕೋಪಗೊಂಡು, ರೆಸ್ಟೋರೆಂಟ್ನ ಕುರ್ಚಿ, ಕಿಟಕಿ ಗಾಜು ಒಡೆದು ಹಾಕಿದ ಘಟನೆ ಕ್ವಾಲಿಟಿ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ನಡೆದಿದೆ.
ನಗರದ ರಘು, ದರ್ಶನ್, ತೇಜು, ಲಕ್ಷ್ಮೀಶ ಹಾಗೂ ಉಮೇಶ್ ಈ ಗಲಾಟೆಯಲ್ಲಿ ಭಾಗಿಯಾಗಿದ್ದಾರೆ. ಸೆಪ್ಟೆಂಬರ್ 7ರ ಮಧ್ಯಾಹ್ನ ಬಾರ್ಗೆ ಬಂದು ಮದ್ಯ ಹಾಗೂ ಊಟ ಆರ್ಡರ್ ಮಾಡಿದ ಇವರಿಗೆ ಸಂಜೆ 7.30ಕ್ಕೆ ಸಿಬ್ಬಂದಿ ಸುದೀಪ್ ₹18,250 ಬಿಲ್ ನೀಡಿದಾಗ ಹಣ ಹೊಂದಿಸಲು ಸಾಧ್ಯವಾಗದೆ ಪರಸ್ಪರ ಜಗಳ ಆರಂಭವಾಗಿದೆ.
ಈ ವೇಳೆ ರಘು ಏಕಾಏಕಿ ಕುರ್ಚಿ ಎಸೆದು ಸಾಮಾನು ಒಡೆದು ಹಾಕಿದ್ದಾನೆ. ಇದನ್ನು ಪ್ರಶ್ನಿಸಿದ ಸುದೀಪ್ಗೆ ರಘು ಗಾಜಿನ ಮದ್ಯದ ಬಾಟಲಿಯಿಂದ ತಲೆಗೆ ಹೊಡೆದಿದ್ದಾನೆ. ನಂತರ ಉಳಿದ ನಾಲ್ವರೂ ಸೇರಿ ಕೈಗೆ ಸಿಕ್ಕ ವಸ್ತುಗಳನ್ನು ನಾಶಮಾಡಿದ್ದಾರೆ.
ಗಲಾಟೆಯ ವೇಳೆ ಬಾರ್ನಲ್ಲಿ ಇದ್ದ ಇತರ ಗ್ರಾಹಕರು ಸಹ ಬಿಲ್ ಪಾವತಿಸದೇ ಹೊರಟುಹೋಗಿದ್ದು, ಒಟ್ಟು ₹1 ಲಕ್ಷ ನಷ್ಟವಾಗಿದೆ.
ನಷ್ಟ ಪರಿಹಾರ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
