ಹಾಸನ ಜಿಲ್ಲಾಸ್ಪತ್ರೆ (ಹಿಮ್ಸ್) ಯಲ್ಲಿ ನಡೆದ ಗಂಭೀರ ಎಡವಟ್ಟಿನಿಂದ ಚಿಕ್ಕಮಗಳೂರು ಜಿಲ್ಲೆಯ ಬೂಚನಹಳ್ಳಿ ಕಾವಲು ಗ್ರಾಮದ ಜ್ಯೋತಿ ಎಂಬುವವರಿಗೆ ಎರಡೂ ಕಾಲುಗಳಲ್ಲಿ ಗಾಯಗಳಾಗಿವೆ.
ಎರಡು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಜ್ಯೋತಿಯ ಎಡಗಾಲು ತೀವ್ರವಾಗಿ ಗಾಯಗೊಂಡಿದ್ದು, ಆಗ ವೈದ್ಯರು ಎಡಗಾಲಿನಲ್ಲಿ ರಾಡ್ ಅಳವಡಿಸಿದ್ದರು. ಇತ್ತೀಚಿನ ದಿನಗಳಲ್ಲಿ ಆ ರಾಡ್ನಿಂದಾಗಿ ಜ್ಯೋತಿಗೆ ನೋವು ಕಾಣಿಸಿಕೊಳ್ಳುತ್ತಿದ್ದರಿಂದ, ಹಿಮ್ಸ್ನ ಶಸ್ತ್ರ ಚಿಕಿತ್ಸಕ ಡಾ. ಸಂತೋಷ್ ಅವರನ್ನು ಸಂಪರ್ಕಿಸಿದ್ದರು.

ಡಾ. ಸಂತೋಷ್ ಅವರು ರಾಡ್ ತೆಗೆಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಶನಿವಾರ ಜ್ಯೋತಿ ಆಸ್ಪತ್ರೆಗೆ ದಾಖಲಾಗಿದ್ದರು. ನೆನ್ನೆ ನಡೆದ ಶಸ್ತ್ರ ಚಿಕಿತ್ಸೆಯ ವೇಳೆ ಎಡಗಾಲಿಗೆ ಶಸ್ತ್ರ ಚಿಕಿತ್ಸೆ ನೀಡಬೇಕಾದ ವೈದ್ಯರು, ನಿರ್ಲಕ್ಷ್ಯದಿಂದ ಬಲಗಾಲಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ತಪ್ಪಿನ ಅರಿವಾದ ನಂತರ ವೈದ್ಯರು ತಕ್ಷಣವೇ ಎಡಗಾಲಿಗೂ ಶಸ್ತ್ರ ಚಿಕಿತ್ಸೆ ನೀಡಿ, ಅಳವಡಿಸಿದ್ದ ರಾಡ್ ತೆಗೆದಿದ್ದಾರೆ. ಇದರಿಂದ ಜ್ಯೋತಿಯ ಎರಡೂ ಕಾಲುಗಳು ಗಾಯಗೊಂಡಿದ್ದು, ಪ್ರಸ್ತುತ ಅವರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಿರ್ಲಕ್ಷ್ಯದಿಂದ ಮಹಿಳೆ ಹಾಗೂ ಕುಟುಂಬದವರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಘಟನೆ ಜಿಲ್ಲಾಸ್ಪತ್ರೆಯ ನಿರ್ವಹಣೆ ಹಾಗೂ ವೈದ್ಯಕೀಯ ಸೇವೆಗಳ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
