ನವದೆಹಲಿ, ಸೆ.24:ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯ ಇಂದು ಮುಕ್ತಾಯಗೊಂಡಿದೆ. ಸುಮಾರು ಆರು ದಶಕಗಳ ಕಾಲ ದೇಶದ ರಕ್ಷಣೆಯಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಮಿಗ್-21 (MiG-21) ಯುದ್ಧ ವಿಮಾನ ತನ್ನ ಕಾರ್ಯಾಚರಣೆ ಜೀವನವನ್ನು ಸಂಪೂರ್ಣವಾಗಿ ಮುಗಿಸಿದೆ.
1963ರಲ್ಲಿ ರಷ್ಯಾದಿಂದ ಭಾರತಕ್ಕೆ ಬಂದ ಮಿಗ್-21 ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಶಕ್ತಿಯನ್ನು ಗಗನಕ್ಕೇರಿಸಿದವು. ಒಂದು ಕಾಲದಲ್ಲಿ “ಭಾರತೀಯ ವಾಯುಪಡೆಯ ಬೆನ್ನೆಲುಬು” ಎಂದು ಕರೆಯಲ್ಪಟ್ಟಿದ್ದ ಈ ಯುದ್ಧ ವಿಮಾನಗಳು ಹಲವು ಪ್ರಮುಖ ಕಾರ್ಯಾಚರಣೆಗಳಲ್ಲಿ ತೊಡಗಿಕೊಂಡಿದ್ದವು. ಭಾರತೀಯ ವಾಯುಪಡೆಯಲ್ಲಿ ದೀರ್ಘಾವಧಿಗೆ ಸೇವೆ ಸಲ್ಲಿಸಿದ ವಿಮಾನ ಎನ್ನುವ ಗೌರವವನ್ನು ಮಿಗ್-21 ಗಳೇ ಪಡೆದುಕೊಂಡಿವೆ.
ವಾಯುಪಡೆ ಮಿಗ್-21 ವಿಮಾನವನ್ನು “ದೇಶದ ಹೆಮ್ಮೆಯನ್ನು ಆಕಾಶದೆತ್ತರಕ್ಕೆ ಹೊತ್ತೊಯ್ದ ಸಮರ ಕುದುರೆ” ಎಂದು ಶ್ಲಾಘಿಸಿದೆ.
ಆದರೆ, ವರ್ಷಗಳ ನಂತರ ಈ ಯುದ್ಧ ವಿಮಾನವು ಸುರಕ್ಷತೆಯ ದೃಷ್ಟಿಯಿಂದ ಟೀಕೆಗೆ ಗುರಿಯಾಯಿತು. ಹಾರಾಟದ ಸಮಯದಲ್ಲಿ ನಡೆದ ಅಪಘಾತಗಳಿಂದಾಗಿ ಜನರು ಇದನ್ನು “ಹಾರುವ ಶವಪೆಟ್ಟಿಗೆ” ಎಂದೇ ಕರೆಯುತ್ತಿದ್ದರು. 2023ರ ಮೇ ತಿಂಗಳಲ್ಲಿ ರಾಜಸ್ಥಾನದಲ್ಲಿ ನಡೆದ ಮಿಗ್-21 ಅಪಘಾತದಲ್ಲಿ ಮೂವರು ಗ್ರಾಮಸ್ಥರು ಸಾವನ್ನಪ್ಪಿದ ಘಟನೆ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.
ಅದಾದ ನಂತರ ಭಾರತೀಯ ವಾಯುಪಡೆ ಮಿಗ್-21 ವಿಮಾನಗಳ ಹಾರಾಟವನ್ನು ಹಂತ ಹಂತವಾಗಿ ಸ್ಥಗಿತಗೊಳಿಸಿತು. ಇದೀಗ ಈ ಪ್ರಸಿದ್ಧ ಯುದ್ಧ ವಿಮಾನ ಭಾರತೀಯ ರಕ್ಷಣಾ ಇತಿಹಾಸದಲ್ಲಿ ಸ್ಮರಣೀಯ ಅಧ್ಯಾಯವಾಗಿ ಉಳಿದಿದೆ.
