ಕೆ.ಆರ್.ಪೇಟೆ, ನ.6: ತಾಲೂಕಿನ ಅಗ್ರಹಾರಬಾಚಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹರಿರಾಯನಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಡಗರ ಸಂಭ್ರಮದಿಂದ ನಡೆಯಿತು.
ಕ್ಲಸ್ಟರ್ ವ್ಯಾಪ್ತಿಯ 12 ಶಾಲೆಗಳ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ. ತಿಮ್ಮೇಗೌಡ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಹಾಡು, ನೃತ್ಯ, ಭಾಷಣ, ನಾಟಕ, ಚಿತ್ರಕಲೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳಬೇಕು. ಇಂತಹ ವೇದಿಕೆಗಳಿಂದ ಗ್ರಾಮೀಣ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳಲ್ಲಿ ಸಾಂಸ್ಕೃತಿಕ, ಕಲಾತ್ಮಕ, ಸಾಹಿತ್ಯಿಕ, ವೈಜ್ಞಾನಿಕ, ಕ್ರೀಡಾ, ಸಂಗೀತ ಹಾಗೂ ನಾಯಕತ್ವದಂತಹ ಹಲವು ಪ್ರತಿಭೆಗಳಿರುತ್ತವೆ. ಕೆಲವರಲ್ಲಿ ನೆನಪಿನ ಶಕ್ತಿ, ವೇಗವಾಗಿ ಲೆಕ್ಕಾಚಾರ ಮಾಡುವ ಸಾಮರ್ಥ್ಯ ಹಾಗೂ ಹೊಸ ಭಾಷೆಗಳನ್ನು ಕಲಿಯುವ ಆಸಕ್ತಿಯಂತಹ ವಿಶೇಷ ಕೌಶಲ್ಯಗಳೂ ಇರುತ್ತವೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳಲ್ಲಿರುವ ಇಂತಹ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ವಿವಿಧ ಸ್ಪರ್ಧೆಗಳಲ್ಲಿ ಮಿಂಚಿದ ಮಕ್ಕಳು
ಹರಿರಾಯನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಕ್ತಿಗೀತೆ, ಜಾನಪದ ಗೀತೆ, ಸಮೂಹ ನೃತ್ಯ, ಏಕಪಾತ್ರಾಭಿನಯ, ಭಾಷಣ, ಚಿತ್ರಕಲೆ ಹಾಗೂ ಕಥೆ ಹೇಳುವಿಕೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.
ಅಗ್ರಹಾರಬಾಚಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸಂತೋಷ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪುಟ್ಟರಾಜು ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗೇಂದ್ರ, ಅಗ್ರಹಾರಬಾಚಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಎ.ಹೆಚ್. ಯೋಗೇಶ್, ಚಿಕ್ಕೋಸಹಳ್ಳಿ ಸುಧಾಮಣಿ, ಅನುವಿನಕಟ್ಟೆಯ ಎ.ಡಿ. ಬಸವರಾಜು, ಚಿಲ್ಲದಹಳ್ಳಿ ರಮೇಶ್, ಬಿ.ಕಲ್ಲಹಳ್ಳಿ ಸುನಂದಮ್ಮ, ಹರಿರಾಯನಹಳ್ಳಿ ಕುಮಾರ್, ಅರೆಬೊಪ್ಪನಹಳ್ಳಿ ವಾಣಿ, ಬೊಮ್ಮನಾಯಕನಹಳ್ಳಿ ವೀಣಾ, ಮೊರಾರ್ಜಿ ಶಾಲೆಯ ಹಿರಿಯ ಶಿಕ್ಷಕ ಕೆ.ಎಸ್. ಚಂದ್ರು, ಶಿಕ್ಷಕರಾದ ತಮ್ಮಯ್ಯ, ನಂಜಪ್ಪ, ಶಾಂತಕುಮಾರಿ, ಗೋವಿಂದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಸಬಾ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರಾದ ಸ್ನೇಹಶ್ರೀ, ಉಷಾ, ಜ್ಯೋತಿ, ಸಹನ, ದೀಪಿಕಾ, ಭಗವಾನ್, ಶ್ರೀನಿವಾಸ್ ಹಾಗೂ ಮಹೇಶ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪೋಷಕರು ಹಾಗೂ ಗ್ರಾಮಸ್ಥರು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಗ್ರಹಾರಬಾಚಹಳ್ಳಿ ಶಾಲೆಯ ಶಿಕ್ಷಕರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು.
– ಶ್ರೀನಿವಾಸ್ ಆರ್.
