ತುಮಕೂರು: ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ (ವಿಮ್ಟೆಕ್) ಕಾಲೇಜಿನಲ್ಲಿ ಅಕ್ಟೋಬರ್ 27 ಮತ್ತು 28ರಂದು ‘A World of Logic and Innovation’ ಶೀರ್ಷಿಕೆಯಡಿ ಎರಡು ದಿನಗಳ ‘ವಿ-ಇನ್ಫಿನಿಟಿ 2025’ ವಸ್ತುಪ್ರದರ್ಶನ À (Expo) ಆಯೋಜಿಸಲಾಗಿದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರದೀಪ್ಕುಮಾರ್ ಎನ್.ಬಿ ತಿಳಿಸಿದ್ದಾರೆ.
ಬಿಸಿಎ ವಿಭಾಗದ ‘ವಿ-ಟೆಕ್ನೊಕ್ರ್ಯಾಟ್ಸ್’ ಮತ್ತು ಬಿಬಿಎ ವಿಭಾಗದ ‘ವಿ-ನೆಕ್ಸೋರಾ’ ಫೋರಂ ವತಿಯಿಂದ ಈ ಎಕ್ಸ್ಪೊ ಆಯೋಜಿಸಲಾಗಿದ್ದು, ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರದೀಪ್ಕುಮಾರ್ ಎನ್.ಬಿ ಮತ್ತು ಮಾಂಗೋಡಿಬಿಯ ಸೀನಿಯರ್ ಅಕಾಡೆಮಿಯ ಪಾರ್ಟ್ನರ್ಶಿಪ್ ಮ್ಯಾನೇಜರ್ ಬಸವದರ್ಶನ್ ಜಿ.ಎನ್. ಅವರು ಚಾಲನೆ ನೀಡಲಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳ ಸೃಜನಶೀಲತೆ, ತಾಂತ್ರಿಕ ನಾವೀನ್ಯತೆ ಮತ್ತು ನೈಪುಣ್ಯದಿಂದ ರೂಪಿತವಾದ ವಿವಿಧ ಮಾದರಿಗಳು ಈ ಪ್ರದರ್ಶನದ ಮುಖ್ಯ ಆಕರ್ಷಣೆಯಾಗಿವೆ. ಕೃತಕ ಬುದ್ಧಿಮತ್ತೆ (ಎಐ), ವರ್ಚುಯಲ್ ರಿಯಾಲಿಟಿ (ವಿಆರ್), ರೊಬೋಟಿಕ್ಸ್, ಫ್ಯಾಕ್ಟರಿ ಸೆಟಪ್ ಮಾದರಿಗಳು, ನವೋದ್ಯಮದ ಕುರಿತ ಮಾದರಿ, 3ಡಿ ಮಾಡೆಲಿಂಗ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಅನ್ವಯಗಳಂತಹ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತಯಾರಿಸಿರುವ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ. ಅಲ್ಲದೇ, ಈ ಮಾದರಿಗಳ ಕುರಿತು ಪ್ರಾತ್ಯಕ್ಷಿಕೆಯನ್ನೂ ನೀಡಲಾಗುತ್ತದೆ. ಎಲ್ಲಾ ತಾಂತ್ರಿಕ ಮಾದರಿಗಳನ್ನು ವಿದ್ಯಾರ್ಥಿಗಳೇ ಸ್ವತಃ ಸೃಜನಶೀಲತೆಯಿಂದ ರಚಿಸಿದ್ದಾರೆ.
ಈ ವಸ್ತುಪ್ರದರ್ಶನದ ಮುಖ್ಯ ಉದ್ದೇಶ, ಮುಂದಿನ ತಲೆಮಾರಿನ ಯುವಜನರಲ್ಲಿ ನಾವೀನ್ಯತೆಯನ್ನು ಸಬಲೀಕರಣಗೊಳಿಸುವುದಾಗಿದ್ದು, ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ, ತಾಂತ್ರಿಕ ಕೌಶಲ್ಯ ಮತ್ತು ಉದ್ಯಮ ಸಾಮರ್ಥ್ಯವನ್ನು ಅನ್ವೇಷಿಸಿ ಪ್ರದರ್ಶಿಸಲು ಚೈತನ್ಯಮಯ ವೇದಿಕೆಯನ್ನು ಒದಗಿಸುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ತುಮಕೂರು: ಸಿಟಿ ಕ್ಲಬ್ನ ನವೀಕೃತ ಶಟಲ್ ಕೋರ್ಟ್ ಉದ್ಘಾಟಿಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್
ಎಐ ಆಧಾರಿತ ಸಮಸ್ಯೆ ಪರಿಹಾರಗಳು, ವಿಆರ್ ಅನುಭವಗಳು ಮತ್ತು ಐಒಟಿ ಸ್ಮಾರ್ಟ್ ಪರಿಸರಗಳಂತಹ ಪ್ರದರ್ಶನಗಳು ಈ ಎಕ್ಸ್ಪೊದ ಆಕರ್ಷಣೀಯ ಅಂಶಗಳಾಗಿವೆ. ಇದು ಕೇವಲ ಮನರಂಜನೆಗೆ ಸೀಮಿತವಲ್ಲ, ನಾವೀನ್ಯತೆ ಮತ್ತು ಜ್ಞಾನ ವಿನಿಮಯಕ್ಕೆ ವೇದಿಕೆಯಾಗಿದ್ದು, ವಿದ್ಯಾರ್ಥಿಗಳ ಭಾಗವಹಿಸುವಿಕೆಯು ಅವರ ಕಲಿಕೆಯನ್ನು ಸಮೃದ್ಧಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ವಸ್ತು ಪ್ರದರ್ಶನ ವೀಕ್ಷಿಸಲು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶವನ್ನು ಒದಗಿಸಲಾಗಿದ್ದು ಆಸಕ್ತ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಗುರುತಿನ ಚೀಟಿಯನ್ನು ತೋರಿಸಿ ವಸ್ತು ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ.
– ಕೆ.ಬಿ.ಚಂದ್ರಚೂಡ
