ಕೆ.ಆರ್.ಪೇಟೆ: ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಶಂಕರ್ ನಾಗ್ ಆಟೋ ನಿಲ್ದಾಣದಲ್ಲಿ ರಾಜರತ್ನ ಡಾ.ಪುನೀತ್ರಾಜ್ ಕುಮಾರ್ ಅವರ 4ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ತಾಲ್ಲೂಕು ರಾಜರತ್ನ ಡಾ.ಪುನೀತ್ರಾಜ್ಕುಮಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅನ್ನಧಾನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಟ್ರಸ್ಟಿನ ಗೌರವಾಧ್ಯಕ್ಷ ವಡಕಹಳ್ಳಿ ಮಂಜೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪುನೀತ್ ರಾಜಕುಮಾರ್ ಸೇವೆ ಎಂಬ ಪದಕ್ಕೆ ಸಾರ್ಥಕತೆಯನ್ನು ತಂದುಕೊಟ್ಟ, ಕನ್ನಡನಾಡಿನ ಅಪರೂಪದ ಮಾಣಿಕ್ಯ. ಯಾರಿಗೂ ಕಾಣದಂತೆ ತಮ್ಮ ಜೀವನದುದ್ದಕ್ಕೂ ರಾಜ್ಯಾದಾದ್ಯಂತ ಕಷ್ಟದಲ್ಲಿರುವ ಅಭಿಮಾನಿ ದೇವರುಗಳಿಗೆ ಲಕ್ಷ ಲಕ್ಷ ದಾನ ಮಾಡಿದ್ದರು. ಇದು ಯಾವುದೇ ಸುದ್ದಿ ಮಾಧ್ಯಮದಲ್ಲಿ ಅವರು ಬದುಕಿರುವ ತನಕ ತಿಳಿದಿರಲಿಲ್ಲ. ಅವರು ಸತ್ತಮೇಲೆ ಅವರ ಸಮಾಜಮುಖಿ ಕಾರ್ಯಕ್ರಮಗಳು ಗೋಚರಿಸಿದವು. ಹೀಗೆ ತಮ್ಮ ಸಮಾಜಮುಖಿ ಕಾರ್ಯ ಚಟುವಟಿಕೆಗಳ ಮೂಲಕ ತಮ್ಮ ಮರಣ ನಂತರವೂ ಜೀವಂತವಾಗಿರುವ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಆದರ್ಶಗಳು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.

ನೊಂದವರು ಶೋಷಿತರು ಹಾಗೂ ಬಡಜನರ ಕಷ್ಟ ಸುಖಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಾ ಬಲಗೈನಲ್ಲಿ ಮಾಡಿದ ಸಹಾಯವು ಎಡಗೈಗೆ ತಿಳಿಯದಂತೆ ತಮ್ಮ ಜೀವನ ದುದ್ದಕ್ಕೂ ನೊಂದವರ ಕಣ್ಣೀರನ್ನು ಒರೆಸುವ ಮೂಲಕ ಭಗವಂತನ ಸಾಕ್ಷಾತ್ಕಾರ ಪಡೆದ ಪುನೀತ್ ರಾಜಕುಮಾರ್ಅವರಂತಹ ವ್ಯಕ್ತಿಗಳು ಇಂದು ಸಮಾಜದಲ್ಲಿ ಅಪರೂಪವಾಗಿದ್ದಾರೆ. ತಮ್ಮ ನಿಸ್ವಾರ್ಥ ಸೇವೆಯ ಮೂಲಕ ತಾವು ಸತ್ತ ನಂತರವೂ ಸಮಾಜದಲ್ಲಿ ಕೋಟ್ಯಾಂತರ ಅಭಿಮಾನಿಗಳ ಪಡೆಯನ್ನು ಹೊಂದಿರುವ ವಿಶ್ವದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಪುನೀತ್ ರಾಜಕುಮಾರ್ ಅವರ ಆದರ್ಶಗಳನ್ನು ನಾವೆಲ್ಲರೂ ಬೆಳೆಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಬಹದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೂನಿಯರ್ ಪುನೀತ್ ರಾಜ್ಕುಮಾರ್ ಮೈಸೂರು ಚಂದ್ರುಮೌರ್ಯ, ವೈರಲ್ ಸ್ಟಾರ್ ಮೈಸೂರು ಪುಣ್ಯ, ಟ್ರಸ್ಟಿನ ಅಧ್ಯಕ್ಷ ಹೆಚ್.ಸಿ.ಸಂತೋಷ್, ಕರವೇ ಅಧ್ಯಕ್ಷ ಡಿ.ಎಸ್.ವೇಣು, ತಾಲ್ಲೂಕು ಕರವೇ ಅಧ್ಯಕ್ಷ ಟೆಂಪೋ ಶ್ರೀನಿವಾಸ್, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಹೆಚ್.ಆರ್.ಸೊಮಶೇಖರ್, ಯುವ ಘಟಕದ ಅಧ್ಯಕ್ಷ ಕೆ.ಎಲ್.ಮಹೇಶ್, ಮಾತೃಭೂಮಿ ವೃದ್ದಾಶ್ರಮದ ಮುಖ್ಯಸ್ಥ ಜೈಹಿಂದ್ ನಾಗಣ್ಣ, ಶಿವಮ್ಮ, ರಾಜರತ್ನ ಡಾ.ಪುನೀತ್ ರಾಜ್ಕುಮಾರ್ ಟ್ರಸ್ಟಿನ ಪದಾಧಿಕಾರಿಗಳಾದ ಹೃತ್ವಿಕ್, ಐ.ಬಿ.ಧರಣಿ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕರ ಭವನ ಮುಂಭಾಗ: ಅದೇ ರೀತಿ ಪಟ್ಟಣದಲ್ಲಿ ಶಿಕ್ಷಕರ ಭವನ ಮುಂಭಾಗದಲ್ಲಿ ತಾಲೂಕು ಆರ್ಯ ಈಡಿಗ ಸಮಾಜ ಹಾಗೂ ಶ್ರೀ ರೇಣುಕಾ ಎಲ್ಲಮ್ಮ ದೇವಿ ದೇವಸ್ಥಾನ ಸಮಿತಿಯು ಕರ್ನಾಟಕರತ್ನ ಡಾ.ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ಅನ್ನದಾನ ಕಾರ್ಯಕ್ರಮ ನಡೆಯಿತು. ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ತಾ.ಪಂ.ಮಾಜಿ ಸದಸ್ಯ ರಾಮಸ್ವಾಮಿ, ತಾಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ದೇವರಾಜು ಶ್ರೀರೇಣುಕಾ ಎಲ್ಲಮ್ಮದೇವಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ವೆಂಕಟಾಚಲಸ್ವಾಮಿ, ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್, ಮಾಜಿ ಸದಸ್ಯರಾದ ಕೆ.ಆರ್.ನೀಲಕಂಠ, ಮುಖಂಡರಾದ ನಂಜುಂಡ, ಪ್ರಕಾಶ್, ಮೂರ್ತಿ, ಅನಂತು, ಚಟ್ಟೆನಹಳ್ಳಿ ನಾಗರಾಜು, ಸಿಂದಘಟ್ಟ ನಾಗೇಶ್, ಅಗ್ರಹಾರಬಾಚಹಳ್ಳಿ ವಾಸು, ದಲಿತ ಮುಖಂಡ ಹೊಸಹೊಳಲು ದೇವರಾಜು ಸೇರಿದಂತೆ ನೂರಾರು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾ.ಪಂ.ವೃತ್ತ ಡಾ.ಪುನೀತ್ ರಾಜ್ಕುಮಾರ್ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಶ್ ನೇತೃತ್ವದಲ್ಲಿ ತಾ.ಪಂ.ವೃತ್ತದಲ್ಲಿರುವ ಪುನೀತ್ ಪುತ್ತಳಿಗೆ ಭಾರೀ ಹೂವಿನ ಹಾರಗಳನ್ನು ಹಾಕಿ ಪುನೀತ್ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯನ್ನು ಸರಳವಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
